ಕೊನೆಯ ಕ್ಷಣದಲ್ಲಿ ರಶ್ಯಕ್ಕೆ ತಿರುಗೇಟು ನೀಡಿದ ಭಾರತ
ಒಲಿಂಪಿಕ್ಸ್ ಅರ್ಹತಾ ಪಂದ್ಯ

ಭುವನೇಶ್ವರ, ನ.1: ಮನ್‌ದೀಪ್ ಸಿಂಗ್ ಗಳಿಸಿದ ಅವಳಿ ಗೋಲುಗಳ ನೆರವಿನಿಂದ ಇಲ್ಲಿನ ಕಳಿಂಗ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಒಲಿಂಪಿಕ್ಸ್ ಅರ್ಹತಾ ಪಂದ್ಯದಲ್ಲಿ ಕೊನೆಯ ಕ್ಷಣದಲ್ಲಿ ರಶ್ಯಕ್ಕೆ ತಿರುಗೇಟು ನೀಡಿದ ಭಾರತದ ಪುರುಷರ ಹಾಕಿ ತಂಡ 4-2 ಅಂತರದಿಂದ ಜಯ ಸಾಧಿಸಿತು. ಈ ಗೆಲುವಿನ ಮೂಲಕ 2020ರ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸುವತ್ತ ದಾಪುಗಾಲಿಟ್ಟಿದೆ.
5ನೇ ನಿಮಿಷದಲ್ಲಿ ರಶ್ಯ ಗೋಲ್‌ಕೀಪರ್‌ರನ್ನು ವಂಚಿಸಿದ ಹರ್ಮನ್‌ಪ್ರೀತ್ ಸಿಂಗ್ ಭಾರತಕ್ಕೆ 1-0 ಮುನ್ನಡೆ ಒದಗಿಸಿ ನೆರೆದಿದ್ದ ಅಭಿಮಾನಿಗಳಿಗೆ ಮುದ ನೀಡಿದರು. 17ನೇ ನಿಮಿಷದಲ್ಲಿ ಆ್ಯಂಡ್ರೂ ಗಳಿಸಿದ ಗೋಲಿನ ನೆರವಿನಿಂದ ರಶ್ಯ 1-1ರಿಂದ ಸಮಬಲ ಸಾಧಿಸಿತು. ಮನ್‌ದೀಪ್ ಸಿಂಗ್ 24ನೇ ನಿಮಿಷದಲ್ಲಿ ಗೋಲು ಗಳಿಸಿ ಭಾರತಕ್ಕೆ ಮೊದಲಾರ್ಧದಂತ್ಯಕ್ಕೆ 2-1 ಮುನ್ನಡೆ ಒದಗಿಸಿದರು. ಕೊನೆಯ 15 ನಿಮಿಷಗಳ ಆಟದಲ್ಲಿ ಹಿರಿಯ ಆಟಗಾರ ಎಸ್.ವಿ . ಸುನೀಲ್(48ನೇ ನಿಮಿಷ) ಹಾಗೂ ಮನ್‌ದೀಪ್(53 ನಿ.)ತಲಾ ಒಂದು ಗೋಲು ಗಳಿಸಿದರು. ಮನ್‌ದೀಪ್ ಪಂದ್ಯದಲ್ಲಿ ಎರಡನೇ ಗೋಲು ಗಳಿಸಿದರು. 60ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸಿದ ರಶ್ಯದ ಸೆಮೆನ್ ಮ್ಯಾಟ್ಕೋಸ್ಕಿ ಸೋಲಿನ ಅಂತರ ತಗ್ಗಿಸಿದರು. ಭಾರತ ಶನಿವಾರ ರಶ್ಯ ತಂಡವನ್ನು ಮತ್ತೊಮ್ಮೆ ಮುಖಾಮುಖಿಯಾಗಲಿದೆ.





