ವಾರ್ವಿಂಕಗೆ ಶಾಕ್ ನೀಡಿದ ನಡಾಲ್ ಕ್ವಾರ್ಟರ್ ಫೈನಲ್‌ಗೆ
ಪ್ಯಾರಿಸ್ ಮಾಸ್ಟರ್ಸ್ ಟೆನಿಸ್ ಟೂರ್ನಿ

ಪ್ಯಾರಿಸ್,ನ.1: ರಫೆಲ್ ನಡಾಲ್ ಸ್ವಿಸ್‌ನ ಸ್ಟಾನ್ ವಾವ್ರಿಂಕರನ್ನು 6-4, 6-4 ನೇರ ಸೆಟ್‌ಗಳ ಅಂತರದಿಂದ ಮಣಿಸುವುದರೊಂದಿಗೆ ಪ್ಯಾರಿಸ್ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ತಲುಪಿದರು.
ನಡಾಲ್, ವಾವ್ರಿಂಕ ವಿರುದ್ಧ ಆಡಿದ 22ನೇ ಪಂದ್ಯದಲ್ಲಿ 19ನೇ ಬಾರಿ ಜಯ ದಾಖಲಿಸಿದರು. ಈ ಮೂಲಕ ಸ್ವಿಸ್ ಆಟಗಾರನ ವಿರುದ್ಧ ತನ್ನ ಪ್ರಾಬಲ್ಯ ಮೆರೆದರು.
ನಡಾಲ್ ಮುಂದಿನ ಸುತ್ತಿನಲ್ಲಿ 2008ರ ಚಾಂಪಿಯನ್ ಜೋ ವಿಲ್ಫೆಡ್ ಸೋಂಗರನ್ನು ಎದುರಿಸಲಿದ್ದಾರೆ. ಸೋಂಗ ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ಜರ್ಮನಿಯ ಜಾನ್ ಲೆನಾರ್ಡ್ ಸ್ಟ್ರಫ್ ವಿರುದ್ಧ 2-6, 6-4, 7-6(6) ಸೆಟ್‌ಗಳ ಅಂತರದಿಂದ ಜಯ ಸಾಧಿಸಿದರು. ನಡಾಲ್ ಅವರು ಸೋಂಗ ವಿರುದ್ಧ 9-4 ಮುನ್ನಡೆ ಸಾಧಿಸಿದ್ದಾರೆ.
ಅಗ್ರ ರ್ಯಾಂಕಿನ ಆಟಗಾರ ನೊವಾಕ್ ಜೊಕೊವಿಕ್, ಕೈಲ್ ಎಡ್ಮಂಡ್ ವಿರುದ್ಧ 7-6(7) 6-1 ಸೆಟ್‌ಗಳ ಅಂತರದಿಂದ ಜಯ ಸಾಧಿಸಿ ಅಂತಿಮ-8ರ ಹಂತ ತಲುಪಿದರು. ನಾಲ್ಕು ಬಾರಿ ಪ್ಯಾರಿಸ್ ಮಾಸ್ಟರ್ಸ್ ಪ್ರಶಸ್ತಿ ಜಯಿಸಿರುವ ಜೊಕೊವಿಕ್ ಮತ್ತೊಂದು ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದಾರೆ. ಸರ್ಬಿಯದ ಜೊಕೊವಿಕ್ ಮುಂದಿನ ಸುತ್ತಿನಲ್ಲಿ ಸೆಫನೊಸ್ ಸಿಟ್‌ಸಿಪಾಸ್‌ರನ್ನು ಎದುರಿಸಲಿದ್ದಾರೆ. ಸಿಟ್‌ಸಿಪಾಸ್, ಅಲೆಕ್ಸ್ ಮಿನೌರ್ ವಿರುದ್ಧ 6-3, 6-4 ಸೆಟ್‌ಗಳ ಅಂತರದಿಂದ ಜಯ ಸಾಧಿಸಿದ್ದಾರೆ.







