ಟಿಪ್ಪು ಪಠ್ಯ ತೆಗೆದ ಕೂಡಲೇ ಇತಿಹಾಸ ಬದಲಾಗಲ್ಲ: ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ

ಮಡಿಕೇರಿ ನ.1: ಪಠ್ಯ ಪುಸ್ತಕದಿಂದ ಟಿಪ್ಪು ಅಧ್ಯಾಯವನ್ನು ತೆಗೆದಾಕ್ಷಣ ಇತಿಹಾಸ ಬದಲಾಗುವುದಿಲ್ಲವೆಂದು ಜಾತ್ಯತೀತ ಜನತಾದಳದ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆಯಲ್ಲಿ ಕೊಡಗು ಜೆಡಿಎಸ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯ ಬಿಜೆಪಿ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ದೇಶದ ಸ್ವಾತಂತ್ರ್ಯಕ್ಕೆ ಪ್ರತಿಯೊಬ್ಬರು ಒಂದೊಂದು ರೀತಿಯ ಕೊಡುಗೆಯನ್ನು ನೀಡಿದ್ದಾರೆ. ಆದರೆ ಪಠ್ಯದಿಂದ ಟಿಪ್ಪು ಪಾಠ ತೆಗೆಯಲು ಹೊರಟಿರುವ ಬಿಜೆಪಿ ಸರ್ಕಾರದ ನಡೆ ಬಾಲಿಶ ಎಂದು ಟೀಕಿಸಿದರು. ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಅವರು ಕೆಜೆಪಿ ಪಕ್ಷ ಸ್ಥಾಪಿಸಿದ ಸಂದರ್ಭ ಟಿಪ್ಪು ಜಯಂತಿಯಲ್ಲಿ ಸನ್ಮಾನ ಸ್ವೀಕರಿಸಿದ್ದಾರೆ. ಒಂದೊಂದು ಸರ್ಕಾರ ಬದಲಾದಂತೆ ಅಭಿಪ್ರಾಯಗಳು ಬದಲಾಗುತ್ತವೆಯೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಉಪ ಚುನಾವಣಾ ಫಲಿತಾಂಶದ ಬಳಿಕ ಜೆಡಿಎಸ್ ನಿಲುವು ಸ್ಪಷ್ಟವಾಗುತ್ತದೆ ಎಂದು ತಿಳಿಸಿದ ಅವರು, ಚುನಾಯಿತ ಸದಸ್ಯ ಹಾಗೂ ಸರ್ಕಾರ ಸಂಪೂರ್ಣವಾಗಿ ಐದು ವರ್ಷಗಳನ್ನು ಪೂರೈಸಬೇಕು, ಯಾರಿಗೂ ತೊಂದರೆ ಆಗಬಾರದು ಎನ್ನುವ ಅರ್ಥದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಸರಕಾರದ ಬಗ್ಗೆ ಮಾತನಾಡಿದ್ದಾರೆ ಹೊರತು ಬಿಜೆಪಿಯನ್ನು ಬೆಂಬಲಿಸುವುದಾಗಿ ಎಲ್ಲೂ ಹೇಳಿಲ್ಲವೆಂದು ಅವರು ಸ್ಪಷ್ಟಪಡಿಸಿದರು.
ಅಸಮಾಧಾನಿತ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಹೇಳಿಕೆಗೆ ಹೆಚ್.ಕೆ.ಕುಮಾರಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಗೆಲ್ಲುವವರೆಗೆ ಒಂದು ರೀತಿ, ಗೆದ್ದ ಮೇಲೆ ಮತ್ತೊಂದು ರೀತಿ ಇರುವುದು ಸರಿಯಲ್ಲವೆಂದರು.
ಪುಟ್ಟಣ್ಣ ಅವರಿಗೆ ಅಸಮಾಧಾನವಿದ್ದರೆ ಎಲ್ಲಿ ಮಾತನಾಡಬೇಕೋ ಅಲ್ಲಿಯೇ ಮಾತನಾಡಬೇಕು. ಅದನ್ನು ಬಿಟ್ಟು ಸಂತೆಯಲ್ಲಿ ಹೋಗಿ ಚರ್ಚಿಸುವುದು ಸರಿಯಲ್ಲ. ಅಸಮಾಧಾನವಿದ್ದರೆ ಮಾತನಾಡಿ ಬಗೆಹರಿಸಲು ಪ್ರಯತ್ನಿಸೋಣ ಎಂದು ಹೆಚ್.ಕೆ.ಕುಮಾರಸ್ವಾಮಿ ಹೇಳಿದರು.
ರಾಜ್ಯದಲ್ಲಿ ಮಹಾಮಳೆಯಿಂದ ಜನ ಸಂಕಷ್ಟಕ್ಕೆ ಸಿಲುಕಿದ್ದರೂ ಬಿಜೆಪಿ ನೇತೃತ್ವದ ರಾಜ್ಯ ಸರಕಾರ ಸಮಪರ್ಕವಾಗಿ ಪರಿಹಾರ ಕಾರ್ಯಗಳನ್ನು ಕೈಗೊಂಡಿಲ್ಲವೆಂದು ಕುಮಾರಸ್ವಾಮಿ ಆರೋಪಿಸಿದರು.







