ಸರಕಾರಿ ಆದೇಶಕ್ಕೆ ಆಕ್ಷೇಪ: ಡಿಡಿಪಿಐ ಕಚೇರಿ ಮೇಲೆ ಕನ್ನಡ ಬಾವುಟ ಹಾರಿಸಿದ ಕನ್ನಡ ಪರ ಹೋರಾಟಗಾರರು

ಮಂಡ್ಯ, ನ.1: ಸರಕಾರಿ ಶಾಲೆಗಳು ಸೇರಿದಂತೆ ರಾಜ್ಯ ಸರಕಾರದ ಕಚೇರಿಗಳಲ್ಲಿ ನವೆಂಬರ್ 1ರಂದು ತ್ರಿವರ್ಣ ಧ್ವಜ ಹಾರಿಸುವಂತೆ ರಾಜ್ಯ ಸರಕಾರ ನೀಡಿದ ಆದೇಶವನ್ನು ಕಡೆಗಣಿಸಿ ಕನ್ನಡಪರ ಹೋರಾಟಗಾರರು ನಗರದ ಡಿಡಿಪಿಐ ಕಚೇರಿ ಮೇಲೆ ಶುಕ್ರವಾರ ಕನ್ನಡ ಬಾವುಟ ಹಾರಿಸಿದರು.
ಕಚೇರಿಯ ಮೇಲಂತಸ್ತಿಗೆ ತೆರಳಿದ ಕನ್ನಡಪರ ಹೋರಾಟಗಾರರಾದ ಷಣ್ಮುಖೇಗೌಡ, ಅಭಿಗೌಡ, ಎಂ.ಬಿ.ನಾಗಣ್ಣಗೌಡ, ಬೂದನೂರು ಸತೀಶ, ಸಂಪತ್ ಕುಮಾರ್ ಅವರು ಕನ್ನಡ ಬಾವುಟ ಹಾರಿಸಿ ಕನ್ನಡಪರ ಘೋಷಣೆಗಳನ್ನು ಕೂಗಿದರು.
ಡಿಡಿಪಿಐ ಕಚೇರಿ ಮೇಲೆ ಕನ್ನಡ ಬಾವುಟ ಹಾರಿಸುವ ಮುನ್ಸೂಚನೆ ಮೇರೆಗೆ ಸ್ಥಳದಲ್ಲಿದ್ದ ಪೊಲೀಸರು ಬಾವುಟ ಹಾರಿಸುವುದನ್ನು ತಡೆಯಲು ವಿಫಲ ಯತ್ನ ನಡೆಸಿದರು. ಸ್ಥಳಕ್ಕಾಮಿಸಿದ ಪಿಎಸ್ಸೈ ವೆಂಕಟೇಶ್ ಮತ್ತು ಸಿಬ್ಬಂದಿ ಹೋರಾಟಗಾರರೊಂದಿಗೆ ವಾಗ್ವಾದ ನಡೆದು ಬಾವುಟ ಕೆಳಗಿಳಿಸುವ ಯತ್ನವೂ ನಡೆಯಿತು.
ಈ ಸಂಧರ್ಭದಲ್ಲಿ ಮಾತನಾಡಿದ ಕನ್ನಡಪರ ಹೋರಾಟಗಾರರು, ನಾವು ಹಾರಿಸುತ್ತಿರುವುದು ಕನ್ನಡ ಬಾವುಟವನ್ನೆ ಹೊರತು ಐಎಸ್‍ಐಎಸ್ ಬಾವುಟವನ್ನಲ್ಲ. ಕನ್ನಡ ರಾಜ್ಯೋತ್ವವದಂದು ಕನ್ನಡ ಬಾವುಟವನ್ನು ಹಾರಿಸದೆ ತ್ರಿವರ್ಣಧ್ವಜ ಹಾರಿಸುವುದಾದರೆ ಆಗಸ್ಟ್ 15ರಂದು ಕನ್ನಡ ಬಾವುಟ ಹಾರಿಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಸಂಸದೆ ಸುಮಲತಾಗೆ ಮನವಿ:
ಇದಕ್ಕೂ ಮೊದಲು ಸಂಸದೆ ಸುಮಲತಾರನ್ನು ಕ್ರೀಡಾಂಗಣದ ಬಳಿ ಭೇಟಿ ಮಾಡಿದ ಕನ್ನಡಪರ ಹೋರಾಟಗಾರರು, ರೈಲ್ವೆ ಹಾಗೂ ಬ್ಯಾಂಕಿಂಗ್ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ಕಲ್ಪಿಸುವಂತೆ ಮತ್ತು ಹಿಂದಿ ಹೇರಿಕೆಗೆ ಆವಕಾಶ ಕಲ್ಪಿಸುವ ಸಂವಿಧಾನದ 344, 351.ವಿಧಿಗಳನ್ನು ರದ್ದುಪಡಿಸಲು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಧನಿ ಎತ್ತುವಂತೆ ಮನವಿ ಮಾಡಿದರು.
ಸಂಸದೆ ಸುಮಲತಾ ಮನವಿ ಸ್ವೀಕರಿಸಿ ಕೇಂದ್ರದ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ಕಲ್ಪಿಸುವಂತೆ ಕೇಂದ್ರ ಸಚಿವ ಸುರೇಶ್ ಅಂಗಡಿ ಬಳಿ ಚರ್ಚಿಸಿದ್ದೇನೆ. ಈ ಕುರಿತು ಸಂಸತ್ತಿನಲ್ಲೂ ಪ್ರಸ್ತಾಪಿಸುವ ಭರವಸೆ ನೀಡಿದರು.
ಭೀಮ್ ಆರ್ಮಿಯ ಜೆ.ರಾಮಯ್ಯ, ನರಸಿಂಹಮೂರ್ತಿ, ಹರ್ಷ, ಇತರರು ಇದ್ದರು.







