ಕರವೇ ಮಹಿಳಾ ಘಟಕದ ಅಧ್ಯಕ್ಷೆಯಿಂದ ಹಲ್ಲೆ ಆರೋಪ: ಕರ್ತವ್ಯಕ್ಕೆ ಹಾಜರಾಗದೆ ವೈದ್ಯರ ಪ್ರತಿಭಟನೆ

ಬೆಂಗಳೂರು, ನ.2: ಕರ್ನಾಟಕ ರಕ್ಷಣಾ ವೇದಿಕೆಯ ಕೆಲ ಕಾರ್ಯಕರ್ತರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಕರ್ತವ್ಯಕ್ಕೆ ಹಾಜರಾಗದೆ ಮಿಂಟೋ ಆಸ್ಪತ್ರೆಯ ಕಿರಿಯ ವೈದ್ಯರು ಪ್ರತಿಭಟನೆ ನಡೆಸಿದರು.
ಶನಿವಾರ ನಗರದ ಮಿಂಟೋ ಆಸ್ಪತ್ರೆ ಆವರಣದಲ್ಲಿ ಜಮಾಯಿಸಿದ ವೈದ್ಯರು, ಮಿಂಟೋದಲ್ಲಿ ಸುಮಾರು 70 ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳಿದ್ದಾರೆ. ವಿಕ್ಟೋರಿಯಾ, ವಾಣಿ ವಿಲಾಸ್ ಸೇರಿ ಒಟ್ಟು 500 ಕಿರಿಯ ವೈದ್ಯರಿದ್ದು, ರಕ್ಷಣೆ ಸಿಗುವರೆಗೂ ಕರ್ತವ್ಯಕ್ಕೆ ಹಾಜರಾಗದಿಲ್ಲ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಮಾಜಿ ಅಧ್ಯಕ್ಷ ಡಾ. ರವೀಂದ್ರ, ವೈದ್ಯರ ಮೇಲೆ ಹಿಂದಿನಿಂದಲೂ ಹಲ್ಲೆ ನಡೆಯುತ್ತಲೇ ಇದೆ. ದೃಷ್ಟಿಗೆ ಸಂಬಂಧಪಟ್ಟಂತೆ ಒಂದು ಸಮಸ್ಯೆ ಎದುರಾಗಿದೆ. ಆ ಪ್ರಕರಣ ನ್ಯಾಯಾಲಯದಲ್ಲಿರುವಾಗ ಹಲ್ಲೆ ಮಾಡಿದ್ದು ಏಕೆ ಎಂದು ಪ್ರಶ್ನೆ ಮಾಡಿದರು.
ನ.1ರಂದು ಹಲ್ಲೆ ಮಾಡಿದ ಕರವೇ ಮಹಿಳಾ ಘಟಕದ ಅಧ್ಯಕ್ಷೆ ಅಶ್ವಿನಿ ಗೌಡ, ಒಂದು ತಿಂಗಳ ಹಿಂದೆ ಕೂಡಾ ಹಲ್ಲೆ ನಡೆಸಿದ್ದಾರೆ. ಕನ್ನಡ ಮಾತಾಡಿ ಎಂದು ಹಲ್ಲೆ ಮಾಡಿರುವುದು ತಪ್ಪು ಎಂದ ಅವರು, ಕೆಲ ಕಾರ್ಯಕರ್ತರು ಹಲ್ಲೆ ನಡೆಸಿರುವುದು ಕರವೇ ಅಧ್ಯಕ್ಷ ನಾರಾಯಣ ಗೌಡ ಅವರ ಮುಖಕ್ಕೆ ಮಸಿ ಬಳಿದಂತೆ ಆಗಿದೆ ಎಂದರು.
ರೋಗಿಗಳ ಪರದಾಟ: ಹಲ್ಲೆ ಆರೋಪ ಸಂಬಂಧ ಏಕಾಏಕಿ ಕೆಲ ವೈದ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡ ಪರಿಣಾಮ, ಹತ್ತಾರು ರೋಗಿಗಳಿಗೆ ತೊಂದರೆ ಉಂಟಾಗಿದ್ದು, ದೂರದ ಊರುಗಳಿಂದ ಬಂದಿದ್ದ ಅನೇಕ ರೋಗಿಗಳು ಪರದಾಟ ನಡೆಸಿದರು.
ಹಲ್ಲೆ ಮಾಡಿಲ್ಲ: ಅಶ್ವಿನಿಗೌಡ ಸ್ಪಷ್ಟನೆ
ಕಣ್ಣು ಕಳೆದುಕೊಂಡವರಿಗೆ ನ್ಯಾಯ ಕೇಳಲು ಮುಂದಾದ ವೇಳೆ, ಅಲ್ಲಿನ ವೈದ್ಯರು ಹಿಂದಿಯಲ್ಲಿ ಮಾತನಾಡಿದಲ್ಲದೆ, ಕನ್ನಡದ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಅವರ ಮೇಲೆ ನಾವು ಹಲ್ಲೆ ಮಾಡಿಲ್ಲ ಎಂದು ಕರವೇ ಮಹಿಳಾ ಘಟಕದ ಅಧ್ಯಕ್ಷೆ ಅಶ್ವಿನಿಗೌಡ ಸ್ಪಷ್ಟನೆ ನೀಡಿದರು.