ಶರೀಫ್ ಪ್ಲೇಟ್ಲೆಟ್ ಸಂಖ್ಯೆಯಲ್ಲಿ ಮತ್ತೆ ಕುಸಿತ; ಪರಿಸ್ಥಿತಿ ಗಂಭೀರ

ಲಾಹೋರ್, ನ. 2: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಝ್ ಶರೀಫ್ರ ರಕ್ತದ ಪ್ಲೇಟ್ಲೆಟ್ ಸಂಖ್ಯೆಯಲ್ಲಿ ಮತ್ತೆ ಕುಸಿತವಾಗಿದ್ದು, ಅವರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿಯೇ ಮುಂದುವರಿದಿದೆ ಎಂದು ಅವರ ಖಾಸಗಿ ವೈದ್ಯ ಶನಿವಾರ ಹೇಳಿದ್ದಾರೆ.
69 ವರ್ಷದ ಶರೀಫ್ರನ್ನು ಅವರ ರಕ್ತದ ಪ್ಲೇಟ್ಲೆಟ್ಗಳ ಸಂಖ್ಯೆ ಅತ್ಯಂತ ಕೆಳಮಟ್ಟವಾದ 2,000ಕ್ಕೆ ಕುಸಿದ ಬಳಿಕ ಅಕ್ಟೋಬರ್ 21ರಂದು ಗಂಭೀರ ಸ್ಥಿತಿಯಲ್ಲಿ ಅವರನ್ನು ಜೈಲಿನಿಂದ ಲಾಹೋರ್ನ ಸರ್ವಿಸಸ್ ಆಸ್ಪತ್ರೆಗೆ ಸೇರಿಸಲಾಗಿತ್ತು.
ಗುರುವಾರ ಅವರ ರಕ್ತದ ಪ್ಲೇಟ್ಲೆಟ್ಗಳ ಸಂಖ್ಯೆ 35,000ದಿಂದ 51,000ಕ್ಕೆ ಏರಿಕೆಯಾಗಿತ್ತು ಹಾಗೂ ಅವರ ಆರೋಗ್ಯ ಸ್ಥಿತಿಯಲ್ಲೂ ಸುಧಾರಣೆಯಾಗಿತ್ತು.
‘‘ಮಾಜಿ ಪ್ರಧಾನಿ ನವಾಝ್ ಶರೀಫ್ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ. ಅವರಿಗೆ ನೀಡಲಾಗುತ್ತಿರುವ ಸ್ಟೀರಾಯ್ಡಿ ಪ್ರಮಾಣವನ್ನು ಕಡಿಮೆ ಮಾಡಲು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಪ್ರಯತ್ನಿಸಿದ್ದಾರೆ. ಆದರೆ, ಇದರಿಂದ ದುರದೃಷ್ಟವಶಾತ್ ಅವರ ಪ್ಲೇಟ್ಲೆಟ್ ಸಂಖ್ಯೆ ಶುಕ್ರವಾರ ಮತ್ತೆ ಕುಸಿದಿದೆ’’ ಎಂದು ಅವರ ಖಾಸಗಿ ವೈದ್ಯ ಅದ್ನಾನ್ ಖಾನ್ ಹೇಳಿದ್ದಾರೆ.
ಪ್ಲೇಟ್ಲೆಟ್ ಸಂಖ್ಯೆ ಕುಸಿಯಲು ಏನು ಕಾರಣ ಎಂಬುದನ್ನು ವಿಳಂಬವಿಲ್ಲದೆ ಪತ್ತೆಹಚ್ಚಬೇಕು ಎಂದು ಅವರು ಹೇಳಿರುವುದಾಗಿ ‘ಜಿಯೋ ನ್ಯೂಸ್’ ವರದಿ ಮಾಡಿದೆ.