ಬಹುಮುಖ ಪ್ರತಿಭೆ ಅಮೋಘ ಹೆಗ್ಡೆಗೆ "ರಾಜ್ಯೋತ್ಸವ ಸಾಧಕ ಪುರಸ್ಕಾರ"

ಮೂಡುಬಿದಿರೆ : ಯಕ್ಷಗಾನ, ಭರತನಾಟ್ಯ, ಕರ್ನಾಟಕ ಸಂಗೀತ, ಡ್ರಾಯಿಂಗ್, ಆವೆ ಮಣ್ಣಿನಿಂದ ಪ್ರತಿಕೃತಿ ಹಾಗೂ ಮೃದಂಗ, ವಯೋಲಿನ್ ವಾದನ ಮುಂತಾದವುಗಳಲ್ಲಿ ತನ್ನ ಪ್ರತಿಭೆಯನ್ನು ಅನಾವರಣಗೊಳಿಸಿ ಬಹುಮುಖ ಪ್ರತಿಭೆ ಎಂದು ಗುರುತಿಸಿಕೊಂಡಿರುವ ಮೂಡುಬಿದಿರೆಯ ಅಮೋಘ ಹೆಗ್ಡೆ ಕೆ ಅವರಿಗೆ ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು "ರಾಜ್ಯೋತ್ಸವ ಸಾಧಕ ಪುರಸ್ಕಾರ"ವನ್ನು ನೀಡಿ ಗೌರವಿಸಿದೆ.
ಆಳ್ವಾಸ್ ಸೆಂಟ್ರಲ್ ಸ್ಕೂಲ್‌ನ ೭ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಮೋಘ ಹೆಗ್ಡೆ ಅವರು ತನ್ನ ಒಂದು ವರ್ಷ ಪ್ರಾಯದಿಂದಲೇ "ಶ್ರೀ ಕೃಷ್ಣ ವೇಷ" ಸ್ಪರ್ಧೆಯಿಂದ ಆರಂಭಗೊಂಡು ನಂತರ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಬಹುಮಾನಗಳನ್ನು ಪಡೆದುಕೊಂಡಿರುತ್ತಾರೆ.
ತನ್ನ 5ನೇ ವಯಸ್ಸಿನಲ್ಲಿ ಅಪ್ಪನ ಹುಟ್ಟು ಹಬ್ಬದ ಉಡುಗೊರೆಯಾಗಿ ಕಥೆ ಬರೆಯಲು ಆರಂಭಿಸಿ 8ನೇ ವರ್ಷದಲ್ಲಿ "ಮುತ್ತುಚಿಪ್ಪು" ಎಂಬ ಪುಸ್ತಕವನ್ನು ಪೂರ್ಣಗೊಳಿಸಿ 2019ನೇ ಸಾಲಿನ ನುಡಿಸಿರಿಯಲ್ಲಿ ಡಾ/ಎಂ.ಮೋಹನ ಆಳ್ವರಿಂದ ಬಿಡುಗಡೆಗೊಳಿಸಲಾಗಿದೆ.
ಪ್ರಶಸ್ತಿಗಳು : ಇವರ ಈ ಸಾಧನೆಗೆ ಕೇಂದ್ರ ಸರಕಾರದ ವಿದ್ಯಾರ್ಥಿ ವೇತನ (ಸಿಸಿಆರ್‌ಐ), ಬೆಂಗಳೂರಿನ ಜ್ಞಾನ ಮಂದಾರ ಅಕಾಡೆಮಿ ವತಿಯಿಂದ "ಕಲಾಶ್ರೀ ಪ್ರಶಸ್ತಿ", ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ "ಪ್ರತಿಭಾ ರತ್ನ ಪ್ರಶಸ್ತಿ", ಸೆಂಟ್ರಲ್ ಗವರ್ನ್ಮೆಂಟ್ ನಡೆಸಿದ ಡ್ರಾಯಿಂಗ್ ಸ್ಪರ್ಧೆಯಲ್ಲಿ ರಾಜ್ಯಮಟ್ಟದ ಪ್ರಶಸ್ತಿ , ಮೈಸೂರಿನಿಂದ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ ಹಾಗೂ ಮಂಗಳೂರಿನ ತುಳುನಾಡ ರಕ್ಷಣಾ ವೇದಿಕೆಯಿಂದ ತೌಳವ ಕುಮಾರ ಪ್ರಶಸ್ತಿಗಳು ದೊರೆತಿವೆ. ಇದಲ್ಲದೆ ಸೈನ್ಸ್ ಮೋಡೆಲ್ "ಇಕೋ ಫ್ರೆಂಡ್ಲಿ ಸಿಟಿ"ಯಲ್ಲಿ ಆಳ್ವಾಸ್ ಸಂಸ್ಥೆಯಲ್ಲಿ ಬಹುಮಾನ ಪಡೆದು ಸಿ.ವಿ.ರಾಮನ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಹಲವಾರು ಸನ್ಮಾನಗಳನ್ನು ಸ್ವೀಕರಿಸಿರುವ ಅಮೋಘ ಹೆಗ್ಡೆಯನ್ನು ಮೈಸೂರಿನ ರಾಜ ಯದುವೀರ್,ಆಳ್ವಾಸ್ ನುಡಿಸಿರಿಯಲ್ಲಿ ಡಾ/ಎಂ.ಮೋಹನ ಆಳ್ವ ಅವರು ಸನ್ಮಾನಿಸಿದ್ದಾರೆ.
ಅಮೋಘ ಹೆಗ್ಡೆ ಮೂಡುಬಿದಿರೆಯ ಡಾ/ಪ್ರಸನ್ನ ಹೆಗ್ಡೆ-ಶ್ರೇಯಾ ದಂಪತಿಯ ಪುತ್ರನಾಗಿದ್ದು "ಯಕ್ಷನಿಧಿ" ಸಂಸ್ಥೆಯ ಶಿವಕುಮಾರ್ ಅವರಿಂದ ಯಕ್ಷಗಾನ, ಚಂದ್ರಶೇಖರ ನಾವುಡರಿಂದ ಭರತನಾಟ್ಯ, ವಿದ್ವಾನ್ ಕೆ.ವಿ.ರಮಣ್ ಅವರಿಂದ ಕರ್ನಾಟಕ ಸಂಗೀತ, ವೆಂಕಿ ಪಲಿಮಾರ್ ಅವರಿಂದ ಸೈನ್ಸ್ ಮೋಡೆಲ್, ಡ್ರಾಯಿಂಗ್, ಕ್ಲೆ ಮೋಡೆಲಿಂಗ್ ಗಮ್ ಪೈಂಟಿಂಗ್, ವಿದ್ವಾನ್ ಪನ್ನಗ ಶರ್ಮರಿಂದ ಮೃದಂಗ ಹಾಗೂ ವಿದ್ವಾನ್ ದುರ್ಗೇಶ್ ಅವರಿಂದ ವಯೋಲಿನ್ ವಾದನದ ತರಬೇತಿಯನ್ನು ಪಡೆಯುತ್ತಿದ್ದಾರೆ.







