ಸದ್ಭಾವನಾ ವೇದಿಕೆಯಿಂದ ಸೌಹಾರ್ದ ಕೂಟ
ಮಂಗಳೂರು, ನ.2: ಸದ್ಭಾವನಾ ವೇದಿಕೆ ಜಪ್ಪು ವರ್ತುಲ ಇದರ ವತಿಯಿಂದ 5ನೆ ವರ್ಷದ ‘ದೀಪಾವಳಿ ಸೌಹಾರ್ದ ಕೂಟ’ವು ಶನಿವಾರ ಮೋರ್ಗನ್ಸ್‌ಗೇಟ್ ಬಳಿಯ ಕಾಸ್ಸಿಯಾ ಚರ್ಚ್ ಹಾಲ್‌ನಲ್ಲಿ ಜರುಗಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಬಿಎಸ್ಸೆನ್ನೆಲ್ ಅಸಿಸ್ಟಂಟ್ ಜನರಲ್ ಮ್ಯಾನೇಜ್ ರತ್ನಾ ಎಸ್.ಉಡುಪ ‘ಹಬ್ಬಗಳ ಮಹತ್ವವು ಆಯಾ ಧರ್ಮದ ಹೆಚ್ಚಿನವರಿಗೇ ಗೊತ್ತಿಲ್ಲ. ಪ್ರತಿಯೊಂದು ಹಬ್ಬಕ್ಕೂ ಅದರದ್ದೇ ಆದ ಮಹತ್ವವಿದೆ. ದೀಪಾವಳಿಯೂ ಅಷ್ಟೆ, ಅದರ ಹಿಂದಿನ ಆಧ್ಯಾತ್ಮಿಕ ಮತ್ತು ಪೌರಾಣಿಕ ಹಿನ್ನಲೆಯ ಬಗ್ಗೆ ಅಧಿಕ ಸಂಖ್ಯೆಯ ಹಿಂದೂಗಳಿಗೂ ತಿಳಿದಿಲ್ಲ. ಸಂಭ್ರಮ ಪಡುವುದು ಮಾತ್ರ ಹಬ್ಬ ಎಂಬಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. ಹಾಗಾಗಬಾರದು. ಹಬ್ಬಗಳ ಮಹತ್ವ ಅರಿತು ಎಲ್ಲರೂ ಜೊತೆಗೂಡಿ ಆಚರಿಸಿದರೆ ಮಾತ್ರ ಅದು ಸಮಾಜಕ್ಕೆ ಮಾದರಿಯಾಗಲಿದೆ ಎಂದರು.
ನಿವೃತ್ತ ಶಿಕ್ಷಕಿ ನೋರಾ ಈವ ಪಿಂಟೋ, ಡಾ. ಅಬ್ದುಲ್ ಮಜೀದ್ ಸೌಹಾರ್ದ ಸಂದೇಶ ನೀಡಿದರು. ಉಪಾಧ್ಯಕ್ಷ ಜೇಸನ್ ಪೀಟರ್ ಡಿಸೋಜ, ಪ್ರಧಾನ ಕಾರ್ಯದರ್ಶಿ ಸಾಲೆಹ್ ಮುಹಮ್ಮದ್ ಮತ್ತಿತರರು ಉಪಸ್ಥಿತರಿದ್ದರು. ವೇದಿಕೆಯ ಅಧ್ಯಕ್ಷ ಎಂ.ವಿ.ಸುರೇಸ್ ಸ್ವಾಗತಿಸಿದರು. ಬಿ.ಎ. ಮುಹಮ್ಮದ್ ಅಲಿ ಕಾರ್ಯಕ್ರಮ ನಿರೂಪಿಸಿದರು.





