ನುಳಿಯಾಲು ರಮಾನಾಥ ರೈ ನಿಧನ

ಪುತ್ತೂರು : ಯಕ್ಷಗಾನ ಮತ್ತು ನಾಟಕ ಕಲಾವಿದರಾಗಿದ್ದ ಪುತ್ತೂರು ತಾಲೂಕಿನ ನಿಡ್ಪಳ್ಳಿ ಗ್ರಾಮದ ನುಳಿಯಾಲು ನಿವಾಸಿ, ಕಾರಿಂಜಗುತ್ತು ರಮಾನಾಥ ರೈ (69) ಅವರು ಅನಾರೋಗ್ಯಕ್ಕೊಳಗಾಗಿ ಶನಿವಾರ ಸ್ವಗೃಹದಲ್ಲಿ ನಿಧನರಾದರು.
ರಮಾನಾಥ ರೈ ಅವರು ಯಕ್ಷಗಾನ ಮತ್ತು ನಾಟಕ ಹಾಸ್ಯ ಕಲಾವಿದರಾಗಿ ಜನಮನ್ನಣೆ ಗಳಿಸಿದ್ದರು. ಅಪಾರ ಮಂದಿ ಯುವಕರಿಗೆ ಯಕ್ಷಗಾನ ಮತ್ತು ನಾಟಕ ತರಬೇತಿ ನೀಡಿ,ಅವರನ್ನು ಕಲಾಕ್ಷೇತ್ರಕ್ಕೆ ಪರಿಚಯಿಸಿದ್ದ ನಾಟ್ಯ ಗುರುಗಳಾಗಿದ್ದರು. ಪೌರಾಣಿಕ ಯಕ್ಷಗಾನ,ತುಳು ಮತ್ತು ಕನ್ನಡ ನಾಟಕಗಳಲ್ಲಿ ಹಾಸ್ಯ ಕಲಾವಿದರಾಗಿ ಕಲಾ ಸೇವೆ ಸಲ್ಲಿಸುವ ಮೂಲಕ ತನ್ನ ಕಲಾ ಪ್ರತಿಭೆಯನ್ನು ಮೆರೆದಿದ್ದ ಅವರು ಕಲಾಸೇವೆಯ ಜತೆಗೆ ಕೃಷಿ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿದ್ದರು. ಬಯ್ಯಮಲ್ಲಿಕೆ ನಾಟಕದ `ಕಾಳು' ಪಾತ್ರ ಅವರಿಗೆ ಹೆಚ್ಚಿನ ಹೆಸರು ತಂದಿತ್ತು.
ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸದಾ ತನ್ನನ್ನು ತೊಡಗಿಸಿಕೊಳ್ಳುತ್ತಿದ್ದ ರಮಾನಾಥ ರೈ ಅವರು,ತನ್ನ ಯೌವ್ವನ ಕಾಲದಲ್ಲಿ ಯುವಕ ಮಂಡಲ ಸೇರಿದಂತೆ ವಿವಿಧ ಸಂಘಟನೆಗಳಲ್ಲಿ ಸಕ್ರೀಯರಾಗಿದ್ದರು. ಇತ್ತೀಚಿನ ಕೆಲ ವರ್ಷಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು ಆ ಬಳಿಕ ಕಲಾಸೇವೆಯಿಂದ ದೂರ ಉಳಿದಿದ್ದರು. ಕಳೆದ ಕೆಲ ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕೊಳಗಾಗಿದ್ದ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.
ಸರಳ ಸಜ್ಜನಿಕೆಯ ವ್ಯಕ್ತಿತ್ವದ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದ ರಮಾನಾಥ ರೈ ಅವರು ಪತ್ನಿ ಕೃಷ್ಣವೇಣಿ.ಆರ್.ರೈ, ಪುತ್ರ ವಿನೋದ್ ರೈ, ಪುತ್ರಿಯರಾದ ವಿನುತಾ ಪ್ರಕಾಶ್ ರೈ, ವಿಸ್ಮಿತಾ ಅಶ್ವಿನ್ ಶೆಟ್ಟಿ, ಸಹೋದರರಾದ ಜಗನ್ನಾಥ ರೈ, ರವಿನಾಥ ರೈ, ಸಹೋದರಿ ಗುಲಾಬಿ.ಜೆ.ಆಳ್ವ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.







