ಬೋಪಣ್ಣ-ಶಪೊವಾಲೊವ್ ಸವಾಲು ಅಂತ್ಯ

ಪ್ಯಾರಿಸ್, ನ.2: ಪ್ಯಾರಿಸ್ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ಭಾರತದ ಅಗ್ರಮಾನ್ಯ ಡಬಲ್ಸ್ ಆಟಗಾರ ರೋಹನ್ ಬೋಪಣ್ಣ ಹಾಗೂ ಕೆನಡಾದ ಡೆನಿಸ್ ಶಪೊವಾಲೊವ್ ಅವರ ಸವಾಲು ಅಂತ್ಯವಾಗಿದೆ. ಇಲ್ಲಿ ಶುಕ್ರವಾರ ಸಂಜೆ ನಡೆದ ಪುರುಷರ ಡಬಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಬೋಪಣ್ಣ ಹಾಗೂ ಶಪೊವಾಲೊವ್ ರಶ್ಯದ ಜೋಡಿ ಕರೆನ್ ಖಚನೊವ್ ಹಾಗೂ ಆ್ಯಂಡ್ರೆ ರುಬ್ಲೊವ್ ವಿರುದ್ಧ ಸೋತಿದ್ದಾರೆ.
ಎಟಿಪಿ ಮಾಸ್ಟರ್ಸ್ 1000 ಟೂರ್ನಮೆಂಟ್‌ನಲ್ಲಿ ಕೇವಲ 80 ನಿಮಿಷಗಳ ಕಾಲ ಅಂತಿಮ-8ರ ಸುತ್ತಿನ ಪಂದ್ಯದಲ್ಲಿ ಬೋಪಣ್ಣ-ಶಪೊವಾಲೊವ್ ರಶ್ಯದ ಜೋಡಿ ವಿರುದ್ಧ 5-7, 7-6, 8-10 ಸೆಟ್‌ಗಳ ಅಂತರದಿಂದ ಸೋತಿದ್ದಾರೆ.
ಬೋಪಣ್ಣ ಹಾಗೂ ಶಪೊವಾಲೊವ್ ಅಂತಿಮ-16ರ ಸುತ್ತಿನ ಪಂದ್ಯದಲ್ಲಿ ಅಮೆರಿಕ-ಅರ್ಜೆಂಟೀನದ ಜೋಡಿ ಮ್ಯಾನುಯೆಲ್ ಗೊಂಝಾಲೆಝ್ ಹಾಗೂ ಆಸ್ಟಿನ್ ಕ್ರಾಜಿಸೆಕ್‌ರನ್ನು ಸೋಲಿಸಿದ್ದರು. ಖಚನೊವ್ ಹಾಗೂ ರುಬ್ಲೊವ್ ಸೆಮಿ ಫೈನಲ್ ಸುತ್ತಿನಲ್ಲಿ ಸ್ಲೋವಾಕಿಯ- ಕ್ರೊಯೇಶಿಯ ಜೋಡಿ ಫಿಲಿಪ್ ಪೊಲಾಸೆಕ್ ಹಾಗೂ ಇವಾನ್ ಡೊಡಿಗ್‌ರನ್ನು ಎದುರಿಸಲಿದ್ದಾರೆ.
Next Story





