ಹನೂರು: ಮುಖ್ಯ ರಸ್ತೆಯಲ್ಲಿ ಹುಲಿ ಪ್ರತ್ಯಕ್ಷ ?
![ಹನೂರು: ಮುಖ್ಯ ರಸ್ತೆಯಲ್ಲಿ ಹುಲಿ ಪ್ರತ್ಯಕ್ಷ ? ಹನೂರು: ಮುಖ್ಯ ರಸ್ತೆಯಲ್ಲಿ ಹುಲಿ ಪ್ರತ್ಯಕ್ಷ ?](https://www.varthabharati.in/sites/default/files/images/articles/2019/11/3/217597-1572719469.jpg)
ಹನೂರು, ನ.2: ಹನೂರು ಪಟ್ಟಣದ ಹೊರವಲಯದ ರಾಮಾಪುರ ಮುಖ್ಯ ರಸ್ತೆಯಲ್ಲಿ ಇತ್ತೀಚೆಗೆ ಚಿರತೆ ಕಾಣಿಸಿಕೊಂಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ, ಜನರ ನಿದ್ದೆಗೆಡಿಸಿದ್ದ ಘಟನೆ ಮಾಸುವ ಮುನ್ನವೇ ಶನಿವಾರ ರಾತ್ರಿ ಇದೇ ರಸ್ತೆಯಲ್ಲಿಯೇ ಹುಲಿ ಕಾಣಿಸಿಕೊಂಡ ಘಟನೆ ನಡೆದಿದ್ದು, ಹುಲಿಯ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ಸ್ಥಳೀಯರನ್ನು ಚಿಂತೆಗೀಡು ಮಾಡಿದೆ.
ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಮಲೆಮಹದೇಶ್ವರ ಕ್ರೀಡಾಂಗಣದ ಬಳಿಯ ರಾಮಾಪುರ ರಸ್ತೆಯಲ್ಲಿ ವಾಯುವಿಹಾರಕ್ಕೆ ತೆರಳಿದ್ದ ಕೆಲವರಿಗೆ ಹುಲಿ ಕಾಣಿಸಿಕೊಂಡಿತ್ತು. ಬಳಿಕ ಮತ್ತೊಂದು ದಿನ ರಾತ್ರಿ ವೇಳೆ ಇದೇ ಮುಖ್ಯ ರಸ್ತೆಯನ್ನು ದಾಟಿ ಚಿರತೆ ಅರಣ್ಯದೊಳಗೆ ಸಂಚರಿಸುತ್ತಿರುವ ದೃಶ್ಯವನ್ನು ಸ್ಥಳೀಯರು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದರು. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಜನರಲ್ಲಿ ಆತಂಕ ಸೃಷ್ಟಿಯಾಗಿತ್ತು.
ಈ ಘಟನೆ ಮಾಸುವ ಮುನ್ನವೇ ಶನಿವಾರ ರಾತ್ರಿ ಇದೇ ರಾಮಾಪುರ ಮುಖ್ಯ ರಸ್ತೆಯಲ್ಲಿ ಹುಲಿ ಪ್ರತ್ಯಕ್ಷವಾಗಿದೆ ಎಂದು ಕೆಲ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.