ಪೆರ್ಮುದೆ: ಮಹಿಳೆಯ ನಿಗೂಢ ಸಾವು ಪ್ರಕರಣ; ಪತಿಯ ಬಂಧನ
ಆರೋಪಿಯ ಮನೆಯ 5ಕ್ಕೂ ಅಧಿಕ ಮಂದಿ ವಿರುದ್ಧ ಪ್ರಕರಣ ದಾಖಲು

ಅಲ್ತಾಫ್
ಮಂಗಳೂರು, ನ.3: ಪೆರ್ಮುದೆಯಲ್ಲಿ ಶನಿವಾರ ನಡೆದ ಲರೀಫತ್ ಎಂಬ ಮಹಿಳೆಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮೃತಳ ಪತಿಯನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ.
ಪೆರ್ಮುದೆಯ ಭಟ್ರಕೆರೆಯ ನಿವಾಸಿ ಅಲ್ತಾಫ್ ಬಂಧಿತ ಆರೋಪಿ. ಅಲ್ತಾಫ್ ನನ್ನು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಬಂಧಿಸಲಾಗಿದೆ. ಈತನ ವಿರುದ್ಧ ಸೆ.306, 498 ಎ, 34 ಅನ್ವಯ ಪ್ರಕರಣ ದಾಖಲಾಗಿದೆ. ಇದಲ್ಲದೆ, ಆತನ ಮನೆಯ 5ಕ್ಕೂ ಅಧಿಕ ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಲರೀಫತ್ ಅವರ ಮೃತದೇಹ ಶನಿವಾರ ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಸಾವಿನ ಬಗ್ಗೆ ಮಹಿಳೆಯ ಮನೆಯವರು ಸಂಶಯ ವ್ಯಕ್ತಪಡಿಸಿ ಪೊಲೀಸ್ ದೂರು ನೀಡಿದ್ದಾರೆ.
ಕತರ್ ಉದ್ಯೋಗಿಯಾಗಿದ್ದ ಅಲ್ತಾಫ್ ಮೂರು ದಿನದ ಹಿಂದೆ ಊರಿಗೆ ಬಂದಿದ್ದರು. ಶನಿವಾರ ಅಲ್ತಾಫ್ ತರಕಾರಿ ತರಲು ಹೊರಗೆ ಹೋಗಿದ್ದು, ಮಧ್ಯಾಹ್ನ ಮನೆಗೆ ಬಂದಾಗ ಲರೀಫತ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂತನ್ನೆಲಾಗಿದೆ. ರವಿವಾರ ಮುಂಜಾನೆ 3:30ರ ಸುಮಾರಿಗೆ ಕೃಷ್ಣಾಪುರದಲ್ಲಿ ದಫನ ಕಾರ್ಯ ನಡೆದಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಬಜ್ಪೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.





