ಬಿಜೆಪಿಯೊಂದಿಗೆ ಮುಖ್ಯಮಂತ್ರಿ ಹುದ್ದೆಯ ಬಗ್ಗೆ ಮಾತ್ರ ಮಾತುಕತೆ: ಸಂಜಯ್ ರಾವತ್

ಮುಂಬೈ, ನ.3: ಮಹಾರಾಷ್ಟ್ರದಲ್ಲಿ ನೂತನ ಸರಕಾರ ರಚನೆಗೆ ಸಂಬಂಧಿಸಿ ತೀವ್ರ ಬಿಕ್ಕಟ್ಟು ಸೃಷ್ಟಿಯಾಗಿರುವ ಮಧ್ಯೆ ‘‘ತನ್ನ ಪಕ್ಷ ಮುಖ್ಯಮಂತ್ರಿ ಹುದ್ದೆಯ ವಿಚಾರಕ್ಕೆ ಸಂಬಂಧಿಸಿ ಮಾತ್ರ ಬಿಜೆಪಿ ಜೊತೆಗೆ ಮಾತುಕತೆಗೆ ಸಿದ್ಧವಿದೆ’’ ಎಂದು ರವಿವಾರ ಶಿವಸೇನೆಯ ಹಿರಿಯ ನಾಯಕ ಸಂಜಯ್ ರಾವತ್ ಹೇಳಿದ್ದಾರೆ.
ಬಿಜೆಪಿ ಹಾಗೂ ಶಿವಸೇನೆ ಅ.21ರಂದು ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧಿಸಿದ್ದವು. ಫಲಿತಾಂಶ ಹೊರಬಿದ್ದ ಬಳಿಕ ಸರಕಾರ ರಚನೆಗೆ ಬಹುಮತ ಲಭಿಸಿದ್ದರೂ ಎರಡೂ ಪಕ್ಷಗಳು ಮುಖ್ಯಮಂತ್ರಿ ಹುದ್ದೆ ಹಂಚಿಕೆಗೆ ಸಂಬಂಧಿಸಿ ಹಗ್ಗ-ಜಗ್ಗಾಟ ನಡೆಸುತ್ತಿವೆ. ಫಲಿತಾಂಶ ಬಂದು ವಾರ ಕಳೆದರೂ ಸರಕಾರ ರಚನೆಯಾಗಿಲ್ಲ.
‘‘ಸರಕಾರ ರಚನೆಯ ಬಿಕ್ಕಟ್ಟು ಮುಂದುವರಿದಿದೆ. ಈ ತನಕ ಸರಕಾರ ರಚನೆಗೆ ಸಂಬಂಧಿಸಿ ಮಾತುಕತೆ ಆಗಿಲ್ಲ. ಒಂದು ವೇಳೆ ಮಾತುಕತೆ ನಡೆದರೆ, ಮುಖ್ಯಮಂತ್ರಿ ಹುದ್ದೆಯ ವಿಚಾರದ ಬಗ್ಗೆಯೇ ಚರ್ಚೆಯಾಗಲಿದೆ’’ಎಂದು ಸುದ್ದಿಗಾರರಿಗೆ ರಾವತ್ ತಿಳಿಸಿದರು.
ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ ಕಳೆದ ತಿಂಗಳ ಅಕಾಲಿಕ ಮಳೆಯಿಂದ ಬೆಳೆ ನಾಶವಾಗಿರುವ ಜಿಲ್ಲೆಗಳಿಗೆ ಭೇಟಿ ನೀಡಲು ರವಿವಾರ ಔರಂಗಾಬಾದ್‌ಗೆ ತೆರಳಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಹೇಳಿದ್ದಾರೆ.





