ಯಡಿಯೂರಪ್ಪ ಫಾರ್ಮುಲಾ ಮಹಾರಾಷ್ಟ್ರದಲ್ಲಿ ನಡೆಯಲ್ಲ: ಶಿವಸೇನೆ

ಹೊಸದಿಲ್ಲಿ, ನ.3: ಮಿತ್ರಪಕ್ಷ ಬಿಜೆಪಿ ಮೇಲೆ ಮತ್ತೊಮ್ಮೆ ವಾಗ್ದಾಳಿ ನಡೆಸಿರುವ ಶಿವಸೇನೆ, ಕರ್ನಾಟಕದ ‘ಆಪರೇಶನ್ ಕಮಲ’ವನ್ನು ಉಲ್ಲೇಖಿಸಿ, ಯಡಿಯೂರಪ್ಪ ಫಾರ್ಮುಲಾ ಮಹಾರಾಷ್ಟ್ರದಲ್ಲಿ ಕಾರ್ಯರೂಪಕ್ಕೆ ಬರಲಾರದು ಎಂದು ಕಿಡಿ ಕಾರಿದೆ.
‘‘ರಾಜಕೀಯದಲ್ಲಿ ಕ್ರಿಮಿನಲ್‌ಗಳು ಪ್ರವೇಶಿಸಿದ್ದಾರೆ. ಅವರು ಸರಕಾರದಲ್ಲಿದ್ದಾರೆ. ಈ ಗೂಂಡಾಗಳು ಕಳೆದ 10 ದಿನಗಳಿಂದ ನಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ. ಇದರಿಂದ ಪ್ರಯೋಜನವಿಲ್ಲ. ಯಡಿಯೂರಪ್ಪ ಫಾರ್ಮುಲಾ ಮಹಾರಾಷ್ಟ್ರದಲ್ಲಿ ನಡೆಯಲ್ಲ’’ ಎಂದು ಶಿವಸೇನೆಯ ಸಂಸದ ಸಂಜಯ್ ರಾವತ್ ರವಿವಾರ ಬಿಜೆಪಿಗೆ ಎಚ್ಚರಿಕೆ ನೀಡಿದರು.
ಕರ್ನಾಟಕದಲ್ಲಿ ವೈರಲ್ ಆಗಿರುವ ವಿಡಿಯೋ ಕ್ಲಿಪ್‌ನ್ನು ಶಿವಸೇನೆಯ ನಾಯಕ ತನ್ನ ಹೇಳಿಕೆಯಲ್ಲಿ ಪ್ರಸ್ತಾವಿಸಿದ್ದಾರೆ. ಜೆಡಿಎಸ್-ಕಾಂಗ್ರೆಸ್ ಸರಕಾರವನ್ನು ಉರುಳಿಸಲು ತನ್ನ ಪಕ್ಷ ಆಪರೇಶನ್ ಕಮಲವನ್ನು ಮಾಡಿತ್ತು. ಇದಕ್ಕೆ ರಾಷ್ಟ್ರಾಧ್ಯಕ್ಷರ ಅನುಮತಿ ಕೂಡ ಇತ್ತು ಎಂದು ಹುಬ್ಬಳ್ಳಿಯಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ನಡೆದ ಸಭೆಯ ವೇಳೆ ಯಡಿಯೂರಪ್ಪ ಹೇಳುತ್ತಿರುವ ಧ್ವನಿಮುದ್ರಣ ವೈರಲ್ ಆಗಿದ್ದು, ಈ ಆಡಿಯೊ ಬಿಜೆಪಿಗೆ ಭಾರೀ ಮುಜುಗರ ಉಂಟು ಮಾಡಿದೆ





