ನ್ಯಾಯಾಧೀಶರಿಗೆ ಕಿರುಕುಳದ ಬಗ್ಗೆ ನಿಯೋಜಿತ ಸಿಜೆಐ ನ್ಯಾ. ಬೊಬ್ಡೆ ಪ್ರತಿಕ್ರಿಯೆ

ಹೊಸದಿಲ್ಲಿ,ನ.3: ಕಿರುಕುಳವನ್ನು ಅನುಭವಿಸುತ್ತಿರುವ ನ್ಯಾಯಾಧೀಶರನ್ನು ಕಂಡಾಗ ತನಗೆ ಚಿಂತೆಯುಂಟಾಗುತ್ತಿದೆ ಎಂದು ಭಾರತದ ನಿಯೋಜಿತ ಮುಖ್ಯ ನ್ಯಾಯಾಧೀಶರಾದ ನ್ಯಾ.ಶರದ ಅರವಿಂದ ಬೊಬ್ಡೆ ಅವರು ಹೇಳಿದ್ದಾರೆ. ಇಂತಹ ದಾಳಿಯನ್ನು ಕಡೆಗಣಿಸುವುದು ಕಷ್ಟವಾಗುತ್ತದೆ ಎಂದೂ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನ್ಯಾಯಾಧೀಶರ ವಿರುದ್ಧ ಅನಿಯಂತ್ರಿತ ಟೀಕೆಗಳು ನಿಂದನೀಯವಾಗಿರುವುದು ಮಾತ್ರವಲ್ಲ,ಅವು ನ್ಯಾಯಾಧೀಶರ ಪ್ರತಿಷ್ಠೆಗೂ ಚ್ಯುತಿ ತರುತ್ತಿವೆ ಎಂದು ರವಿವಾರ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ನ್ಯಾ.ಬೊಬ್ಡೆ ಹೇಳಿದರು. 63ರ ಹರೆಯದ ಬೊಬ್ಡೆ ನ.18ರಂದು ಭಾರತದ 47ನೇ ಮುಖ್ಯ ನ್ಯಾಯಾಧೀಶರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಸೇರಿದಂತೆ ನ್ಯಾಯಾಧೀಶರ ತೀರ್ಪುಗಳ ಬದಲು ಅವರನ್ನು ಟೀಕಿಸುವುದು ನಿಜಕ್ಕೂ ಮಾನನಷ್ಟ ಅಪರಾಧವಾಗಿದೆ ಎಂದೂ ಅವರು ಹೇಳಿದರು.
“ನ್ಯಾಯಾಧೀಶರನ್ನು ಟೀಕಿಸುತ್ತಿರುವುದು ನಿಮ್ಮನ್ನು ಚಿಂತೆಗೀಡು ಮಾಡಿದೆಯೇ!” ಎಂಬ ಪ್ರಶ್ನೆಗೆ ಧನಾತ್ಮಕವಾಗಿ ಉತ್ತರಿಸಿದ ನ್ಯಾ.ಬೊಬ್ಡೆ ಅವರು,ಅದು ನ್ಯಾಯಾಲಯಗಳ ಕಾರ್ಯಗಳ ಮೇಲೆ ಪ್ರಭಾವಗಳನ್ನು ಬೀರಬಹುದು ಮತ್ತು ತಮಗೆ ಕಿರುಕುಳ ನೀಡಲಾಗುತ್ತಿದೆ ಎಂದು ಭಾವಿಸುವ ನ್ಯಾಯಾಧೀಶರನ್ನು ಕಂಡಾಗ ನನಗೆ ಚಿಂತೆ ಕಾಡುತ್ತದೆ. ಇದನ್ನು ಯಾರೂ ಇಷ್ಟ ಪಡುವುದಿಲ್ಲ. ಟೀಕೆಗಳನ್ನು ಕಡೆಗಣಿಸಲು ಪ್ರತಿಯೊಬ್ಬರೂ ದಪ್ಪ ಚರ್ಮವನ್ನು ಹೊಂದಿಲ್ಲ. ನ್ಯಾಯಾಧಿಶರೂ ಸಾಮಾನ್ಯ ಮನುಷ್ಯರೇ ಆಗಿದ್ದಾರೆ” ಎಂದರು.
ಸಾಮಾಜಿಕ ಜಾಲತಾಣಗಳಲ್ಲಿ ಅನಿಯಂತ್ರಿತ ಟೀಕೆಗಳನ್ನು ನಿಲ್ಲಿಸಲು ಸರ್ವೋಚ್ಚ ನ್ಯಾಯಾಲಯವು ಸದ್ಯಕ್ಕೆ ಏನೂ ಮಾಡುವಂತಿಲ್ಲ. ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎನ್ನುವುದೂ ನಮಗೆ ಗೊತ್ತಿಲ್ಲ. ಇಂತಹ ಟೀಕೆಗಳು ಸ್ವರೂಪದಲ್ಲಿ ನಿಂದನೀಯವಾಗಿವೆ ಮಾತ್ರವಲ್ಲ,ನ್ಯಾಯಾಧೀಶರ ಗೌರವವನ್ನೂ ಹಾಳುಗೆಡವುತ್ತಿವೆ ಎಂದ ಅವರು,ಹೀಗಿದ್ದರೂ ಈ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರವಿಲ್ಲ ಎಂದು ದೂರಲಾಗುತ್ತಿದೆ ಎಂದು ವ್ಯಂಗ್ಯವಾಡಿದರು.
ನ್ಯಾಯದಾನವನ್ನು ಅನಗತ್ಯವಾಗಿ ವಿಳಂಬಿಸುವಂತಿಲ್ಲ,ಅದಕ್ಕಾಗಿ ಅನಗತ್ಯ ಅವಸರವೂ ಕೂಡದು. ಹೀಗಾಗಿ ಸಕಾಲದಲ್ಲಿ ನ್ಯಾಯದಾನ ಯಾವುದೇ ನ್ಯಾಯಾಂಗ ವ್ಯವಸ್ಥೆಯ ಅತ್ಯುನ್ನತ ಆದ್ಯತೆಯಾಗಿರಬೇಕು. ನ್ಯಾಯದಾನದಲ್ಲಿ ಅನಗತ್ಯ ವಿಳಂಬವು ಅಪರಾಧಗಳು ಹೆಚ್ಚಲು ಕಾರಣವಾಗುತ್ತದೆ ಮತ್ತು ಕಾನೂನಿನ ಆಡಳಿತವೂ ತನ್ನ ಮೊನಚನ್ನು ಕಳೆದುಕೊಳ್ಳುತ್ತದೆ ಎಂದರು. ಯಾವುದೇ ನ್ಯಾಯಾಂಗ ವ್ಯವಸ್ಥೆಯು ನ್ಯಾಯದ ವಿತರಣೆಗಾಗಿ ಕೃತಕ ಬುದ್ಧಿಮತ್ತೆಯ ಬಳಕೆ ಸೇರಿದಂತೆ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಇದು ಸಕಾಲವಾಗಿದೆ ಮತ್ತು ಇದು ತ್ವರಿತವಾಗಿ ನ್ಯಾಯದಾನ ಮಾಡಲು ನ್ಯಾಯಾಧೀಶರಿಗೆ ನೆರವಾಗುತ್ತದೆ ಎಂದು ನ್ಯಾ.ಬೊಬ್ಡೆ ಹೇಳಿದರು.
ನ್ಯಾಯವು ಯಾವುದೇ ನ್ಯಾಯಾಂಗ ವ್ಯವಸ್ಥೆಯ ಅತ್ಯುನ್ನತ ಆದ್ಯತೆಯಾಗಿರಬೇಕು ಮತ್ತು ಯಾವುದೇ ಕಾರಣಕ್ಕೂ ಅದನ್ನು ಇತರ ವಿಷಯಕ್ಕಾಗಿ ಬಲಿದಾನ ಮಾಡಬಾರದು,ಏಕೆಂದರೆ ನ್ಯಾಯಾಲಯಗಳ ಅಸ್ತಿತ್ವಕ್ಕೆ ನ್ಯಾಯವೇ ಕಾರಣವಾಗಿದೆ. ಬಲಿದಾನ ಮಾಡಿದರೂ ಏನೂ ವ್ಯತ್ಯಾಸವಾಗುವುದಿಲ್ಲ,ನ್ಯಾಯವೇ ಏಕೈಕ ಗುರಿಯಾಗಿರುತ್ತದೆ. ಈ ಪ್ರಕ್ರಿಯೆಯಲ್ಲಿ ನ್ಯಾಯವು ಸಕಾಲದಲ್ಲಿ ವಿತರಣೆಯಾಗುವಂತೆ ನೀವು ನೋಡಿಕೊಳ್ಳಬೇಕು ಎಂದರು.