ಕೇರಳ ಸರಕಾರವನ್ನು ತರಾಟೆಗೆತ್ತಿಕೊಂಡ ಸಿಪಿಎಂ: ಕಾರಣವೇನು ಗೊತ್ತಾ?

ಹೊಸದಿಲ್ಲಿ,ನ.3: ಅಕ್ರಮ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ)ಯಡಿ ಇಬ್ಬರು ಕಾನೂನು ವಿದ್ಯಾರ್ಥಿಗಳನ್ನು ಬಂಧಿಸಿರುವುದಕ್ಕಾಗಿ ತೀವ್ರ ಟೀಕೆಗಳಿಗೆ ಗುರಿಯಾಗಿರುವ ಕೇರಳ ಸರಕಾರವು, ಬಂಧಿತರ ವಿರುದ್ಧ ಆರೋಪಗಳ ಪರಿಶೀಲನೆಗಾಗಿ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಿಂದ ನೇಮಿತ ಸಮಿತಿಯೊಂದನ್ನು ರಚಿಸುವುದಾಗಿ ಪ್ರಕಟಿಸಿದೆ.
ಸಮಿತಿಯು ತನ್ನ ವರದಿಯನ್ನು ಸಲ್ಲಿಸಿದ ಬಳಿಕವೇ ಬಂಧಿತರ ವಿರುದ್ಧ ಕಾನೂನು ಕ್ರಮಕ್ಕೆ ಅನುಮತಿ ನೀಡಲು ಸರಕಾರವು ಒಪ್ಪಿಕೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಬಂಧಿತ ವಿದ್ಯಾರ್ಥಿಗಳಾಗಿರುವ ಅಲ್ಲಾನ್ ಶುಹೈಬ್ ಮತ್ತು ತಹಾ ಫಝಲ್ ಅವರು ಕೋಝಿಕ್ಕೋಡ್‌ನ ಸಿಪಿಎಂ ಕಾರ್ಯಕರ್ತರಾಗಿದ್ದಾರೆ.
ಮಾಧ್ಯಮಗಳು ವರದಿ ಮಾಡಿರುವಂತೆ ನ.1ರಂದು ರಾತ್ರಿ ಪಂದಿರಾನ್‌ಕಾವು ಎಂಬಲ್ಲಿ ಗಸ್ತುನಿರತರಾಗಿದ್ದ ಪೊಲೀಸರು ರಸ್ತೆಯಲ್ಲಿ ಶಂಕಾಸ್ಪದವಾಗಿ ತಿರುಗುತ್ತಿದ್ದ ಮೂವರನ್ನು ತಡೆದು ವಿಚಾರಿಸಿದ್ದರು. ಈ ವೇಳೆ ಅವರಲ್ಲೋರ್ವ ‘ಮಾವೋವಾದಿ ಸಾಹಿತ್ಯ’ವಿದ್ದ ಬ್ಯಾಗೊಂದನ್ನು ಬಿಟ್ಟು ಪರಾರಿಯಾಗಿದ್ದ. ಶುಹೈಬ್ ಮತ್ತು ಫಝಲ್ ಅವರನ್ನು ವಶಕ್ಕೆ ತೆಗೆದುಕೊಂಡಿದ್ದ ಪೊಲೀಸರು ಅವರ ನಿವಾಸಗಳ ಮೇಲೂ ದಾಳಿಗಳನ್ನು ನಡೆಸಿದ್ದರು.
ಈ ವಿಷಯದಲ್ಲಿ ವಿವರಣೆಯನ್ನು ನೀಡುವಂತೆ ರಾಜ್ಯದ ಮುಖ್ಯಮಂತ್ರಿ ಪಿ.ವಿಜಯನ್ ಅವರು ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಐವರು ಶಂಕಿತ ಮಾವೋವಾದಿಗಳು ಕೇರಳ ಪೊಲೀಸರಿಂದ ಕೊಲ್ಲಲ್ಪಟ್ಟಿದ್ದಾರೆ.
ಇಬ್ಬರು ಕಾರ್ಯಕರ್ತರ ಬಂಧನ ರಾಜ್ಯದಲ್ಲಿಯ ಎಡಪಕ್ಷಗಳ ನಡುವೆ ಒಡಕನ್ನು ಮೂಡಿಸಿದ್ದು,ಸರಕಾರವನ್ನು ಮುಖ್ಯವಾಗಿ ಗೃಹ ಇಲಾಖೆಯನ್ನು ಪೇಚಿಗೆ ಸಿಲುಕಿಸಿದೆ. ರಾಜ್ಯ ಪೊಲೀಸರ ವಿರುದ್ಧ ತೀವ್ರ ದಾಳಿಯನ್ನು ನಡೆಸಿರುವ ಸಿಪಿಎಂ ಪಾಲಿಟ್ ಬ್ಯೂರೊ ಸದಸ್ಯ ಎಂ.ಎ.ಬೇಬಿ ಮತ್ತು ಸಿಪಿಐ ರಾಜ್ಯ ಕಾರ್ಯದರ್ಶಿ ಕೆ.ರಾಜೇಂದ್ರನ್ ಅವರು ಬಂಧನಗಳ ಸ್ವರೂಪವನ್ನು ಪ್ರಶ್ನಿಸಿದ್ದಾರೆ. ಯುಎಪಿಎ ಕರಾಳ ಶಾಸನವಾಗಿದೆ ಎನ್ನುವುದರಲ್ಲಿ ಸಿಪಿಎಂ ಮತ್ತು ಕೇರಳ ಸರಕಾರಕ್ಕೆ ಯಾವುದೇ ಶಂಕೆಯಿಲ್ಲ. ಆದರೆ ರಾಜ್ಯದ ಕೆಲವು ಪೊಲೀಸ್ ಅಧಿಕಾರಿಗಳಿಗೆ ಇನ್ನೂ ಇದನ್ನು ಮನದಟ್ಟು ಮಾಡಿಸಬೇಕಿದೆ ಎಂದು ಬೇಬಿ ಹೇಳಿದ್ದಾರೆ.
ಪ್ರತಿಪಕ್ಷ ಯುಡಿಎಫ್ ಕೂಡ ಸರಕಾರದ ಕ್ರಮವನ್ನು ಮತ್ತು ಬಂಧನಗಳನ್ನು ನಡೆಸಿದ ರೀತಿಯನ್ನು ಟೀಕಿಸಿದೆ.







