ಬೆಂಗಳೂರು: ವಿದೇಶಿ ಪ್ರಜೆಯ ಕೊಲೆ

ಬೆಂಗಳೂರು, ನ.3: ವಿದೇಶಿ ಪ್ರಜೆಯೊಬ್ಬನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದಿರುವ ಘಟನೆ ಇಲ್ಲಿನ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಹೆಣ್ಣೂರಿನ ಜಾನಕಿ ರಾಂ ಲೇಔಟ್‌ನಲ್ಲಿ ಈ ಘಟನೆ ನಡೆದಿದ್ದು, ನೈಜೀರಿಯಾ ದೇಶದ ಮಾರೋಡೆ (39) ಕೊಲೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಕೃತ್ಯವೆಸಗಿದ ಆರೋಪದಡಿ ಸಾಮ್ಯುಯೆಲ್ (30) ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶೈಕ್ಷಣಿಕ ವೀಸಾ ಆಧಾರದಡಿ ನಗರಕ್ಕೆ ಬಂದಿದ್ದ ಮಾರೋಡೆ ನಗರದಲ್ಲಿ ವಾಸಿಸುತ್ತಿದ್ದು, ಶನಿವಾರ ಸಂಜೆ 4ರ ವೇಳೆ, ಸ್ನೇಹಿತರ ಜೊತೆ ಊಟ ಮಾಡಲು ಇಲ್ಲಿನ ಜಾನಕಿರಾಂ ಲೇಔಟ್‌ನ ಖಾಸಗಿ ಹೋಟೆಲ್‌ಗೆ ಬಂದಿದ್ದ. ಮಾರೋಡೆಗೆ ಪರಿಚಯಸ್ಥನಾಗಿದ್ದ ಸಾಮ್ಯುಯೆಲ್ ಕೂಡ ಊಟ ಮಾಡಿ ಮದ್ಯಪಾನ ಮಾಡಿದ್ದು, ಮನೆಗೆ ಹೋಗುವಾಗ ಊಟ ತೆಗೆದುಕೊಂಡು ಹೋಗುವ ಬಾಕ್ಸ್ ವಿಚಾರವಾಗಿ ಜಗಳ ನಡೆದಿದೆ ಎಂದು ಹೇಳಲಾಗುತ್ತಿದೆ.
ಇದರಿಂದ ಆಕ್ರೋಶಗೊಂಡ ಮಾರೋಡೆ, ಸಾಮ್ಯುಯೆಲ್‌ನ ಕಪಾಳಕ್ಕೆ ಹೊಡೆದಿದ್ದು, ಬಳಿಕ ಸಾಮ್ಯುಯೆಲ್ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಕೊಲೆ ಗೈದಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.





