ಅಯೋಧ್ಯೆ ಕುರಿತ ಗೃಹ ಇಲಾಖೆಯ ವರದಿಯನ್ನು ನರಸಿಂಹ ರಾವ್ ತಿರಸ್ಕರಿಸಿದ್ದರು: ಮಾಧವ ಗೋಡ್ಬೋಲೆ
“ಇಚ್ಛಾಶಕ್ತಿಯಿದ್ದಿದ್ದರೆ ಬಾಬರಿಯನ್ನು ಉಳಿಸಬಹುದಿತ್ತು”
ಹೊಸದಿಲ್ಲಿ, ನ.3: ರಾಜಕೀಯ ಇಚ್ಛಾಶಕ್ತಿಯಿದ್ದರೆ ಬಾಬರಿ ಮಸೀದಿಯನ್ನು ಉಳಿಸಬಹುದಿತ್ತು. 1992ರಲ್ಲಿ ಗೃಹ ಇಲಾಖೆ ರೂಪಿಸಿದ್ದ ಸಮಗ್ರ ಆಕಸ್ಮಿಕ ಕ್ರಿಯಾಯೋಜನೆಯನ್ನು ಅಂದಿನ ಪ್ರಧಾನಿ ನರಸಿಂಹ ರಾವ್ ತಿರಸ್ಕರಿಸಿದ್ದರು ಎಂದು ಗೃಹ ಇಲಾಖೆಯ ಮಾಜಿ ಕಾರ್ಯದರ್ಶಿ ಮಾಧವ ಗೋಡ್ಬೋಲೆ ಹೇಳಿದ್ದಾರೆ.
1992ರಲ್ಲಿ, ಬಾಬರಿ ಮಸೀದಿ ಧ್ವಂಸಗೊಳಿಸುವ ಮೊದಲು ಗೃಹ ಇಲಾಖೆ ಸಮಗ್ರ ಆಕಸ್ಮಿಕ ಕ್ರಿಯಾಯೋಜನೆ ರೂಪಿಸಿತ್ತು. ಆದರೆ ಪ್ರಧಾನಿ ಅದನ್ನು ತಿರಸ್ಕರಿಸಿದ್ದರು. ಆಗ ಪ್ರಧಾನ ಮಂತ್ರಿಗಳ ಮಟ್ಟದಲ್ಲಿ ರಾಜಕೀಯ ಉಪಕ್ರಮ ಕೈಗೊಂಡಿದ್ದರೆ ಈ ರಾಮಾಯಣದ ಮಹಾಭಾರತವನ್ನು ನಿವಾರಿಸಬಹುದಿತ್ತು ಎಂದು ಅಯೋಧ್ಯೆ ಕುರಿತು ಬರೆದಿರುವ ಪುಸ್ತಕದಲ್ಲಿ ಗೋಡ್ಬೋಲೆ ಹೇಳಿದ್ದಾರೆ.
ಈ ನಿರ್ಣಾಯಕ ಟೆಸ್ಟ್ ಪಂದ್ಯದಲ್ಲಿ ಪ್ರಧಾನಿಯಾಗಿ ನರಸಿಂಹ ರಾವ್ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಆದರೆ ದುರದೃಷ್ಟವಶಾತ್, ಅವರು ಆಟವಾಡದ ನಾಯಕನಾಗಿ ಇರಬೇಕಾಯಿತು . ಮಸೀದಿಯ ಅಸ್ತಿತ್ವಕ್ಕೆ ಗಂಭೀರ ಬೆದರಿಕೆ ಎದುರಾದ ಸಂದರ್ಭ ರಾವ್ ಅವರಲ್ಲದೆ ಮಾಜಿ ಪ್ರಧಾನಿಗಳಾದ ರಾಜೀವ್ ಗಾಂಧಿ ಹಾಗೂ ವಿಪಿ ಸಿಂಗ್ ಸಕಾಲಿಕ ಕ್ರಮ ಕೈಗೊಳ್ಳಲು ವಿಫಲರಾದರು ಎಂದು ‘ದಿ ಬಾಬ್ರಿ ಮಸೀದಿ-ರಾಮ್ ಮಂದಿರ ಡೈಲೆಮೊ: ಆ್ಯನ್ ಆ್ಯಸಿಡ್ ಟೆಸ್ಟ್ ಫಾರ್ ಇಂಡಿಯಾಸ್ ಕಾನ್‌ಸ್ಟಿಟ್ಯೂಷನ್’ ಎಂಬ ಕೃತಿಯಲ್ಲಿ ಗೋಡ್ಬೋಲೆ ಬರೆದಿದ್ದಾರೆ.
ರಾಜೀವ್ ಪ್ರಧಾನಿಯಾಗಿದ್ದ ಸಂದರ್ಭ ವಿವಾದ ಪರಿಹಾರಕ್ಕೆ ಕೆಲವು ಕಾರ್ಯಸಾಧ್ಯವಾದ ಹೊಂದಾಣಿಕೆ ಪರಿಹಾರಗಳನ್ನು ಪ್ರಸ್ತಾವಿಸಲಾಗಿತ್ತು. ಆದರೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಬಾಬ್ರಿ ಮಸೀದಿ ಹಾಗೂ ಸುತ್ತಮುತ್ತಲಿನ ನಿರ್ದಿಷ್ಟ ಪ್ರದೇಶವನ್ನು ಕೇಂದ್ರ ಸರಕಾರದ ವಶಕ್ಕೆ ಒಪ್ಪಿಸುವ ಅಧಿಸೂಚನೆಯನ್ನು ಘೋಷಿಸಿದ ಬಳಿಕ ವಿಪಿ ಸಿಂಗ್ ದೃಢ ನಿಲುವು ತಳೆದಿದ್ದರು.
ಸಂಬಂಧಿತ ಸಂಸ್ಥೆಗಳು ಹಾಗೂ ಅಧಿಕಾರಿಗಳೊಂದಿಗೆ ವಿಸ್ತೃತ ಚರ್ಚೆಯ ಬಳಿಕ ಗೃಹ ಸಚಿವಾಲಯ ಸಂವಿಧಾನದ 356ನೇ ವಿಧಿಯನ್ನು ಬಳಸಿಕೊಂಡು ಸಂಕೀರ್ಣವನ್ನು ವಶಕ್ಕೆ ಪಡೆಯುವ ಸಮಗ್ರ ಮತ್ತು ಆಕಸ್ಮಿಕ ಯೋಜನೆ ಸಿದ್ಧಪಡಿಸಿತ್ತು. ಈ ನಿಟ್ಟಿನಲ್ಲಿ ಕಾನೂನು ಸಚಿವಾಲಯವು ಸಂಪುಟದ ಟಿಪ್ಪಣಿಗೆ ಅನುಮೋದನೆ ಪಡೆದಿತ್ತು. ನವೆಂಬರ್ 4ರಂದು ಈ ಯೋಜನೆಯ ವರದಿಯನ್ನು ಸಂಪುಟ ಕಾರ್ಯದರ್ಶಿ, ಪ್ರಧಾನಿಯವರ ಪ್ರಧಾನ ಕಾರ್ಯದರ್ಶಿ, ಪ್ರಧಾನಿಯವರ ಹಿರಿಯ ನ್ಯಾಯವಾದಿ, ಗೃಹ ಸಚಿವರು ಹಾಗೂ ಪ್ರಧಾನಿಗೆ ಸಲ್ಲಿಸಲಾಗಿತ್ತು.
ಬಾಬ್ರಿ ಮಸೀದಿ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಕೇಂದ್ರ ಅರೆಸೇನಾ ಪಡೆ ವಶಕ್ಕೆ ಪಡೆದು ಭದ್ರತೆ ಒದಗಿಸುವ ಬಗ್ಗೆ ವರದಿಯಲ್ಲಿ ಒತ್ತು ನೀಡಲಾಗಿತ್ತು. ಉದ್ದೇಶಿತ ಕರಸೇವೆ ನಡೆಯಲಿರುವ ದಿನಕ್ಕಿಂತ ಸಾಕಷ್ಟು ಮೊದಲೇ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಬೇಕೆಂದು ಅಭಿಪ್ರಾಯಪಡಲಾಗಿತ್ತು. ಅಲ್ಲದೆ ಕೇಂದ್ರ ಅರೆಸೇನಾ ಪಡೆ ಕಾರ್ಯಾಚರಣೆ ಆರಂಭಿಸುವ ಮೊದಲು 356ನೇ ವಿಧಿಯಡಿ ಅತ್ಯಗತ್ಯವಾಗಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕೆಂದು ತಿಳಿಸಲಾಗಿತ್ತು.
ಆದರೆ ಈ ಯೋಜನೆ ಕಾರ್ಯಸಾಧ್ಯವಲ್ಲ ಎಂದು ಭಾವಿಸಿದ ರಾವ್ ಅದನ್ನು ತಿರಸ್ಕರಿಸಿದರು ಎಂದು ಗೋಡ್ಬೋಲೆ ಹೇಳಿದ್ದಾರೆ.
ಸಂವಿಧಾನದಡಿ ಕೇಂದ್ರ ಸರಕಾರಕ್ಕೆ ಲಭ್ಯವಾಗಿರುವ ಅಧಿಕಾರದ ಬಗ್ಗೆ ಪ್ರಧಾನಿ ರಾವ್ ವಿಭಿನ್ನ ನಿಲುವು ತಳೆದಿದ್ದರು ಮತ್ತು ರಾಜ್ಯ ಸರಕಾರವು ತನ್ನ ಬದ್ಧತೆಯನ್ನು ಪುನರುಚ್ಚರಿಸಿ ಕೇಂದ್ರ ಸರಕಾರ, ರಾಷ್ಟ್ರೀಯ ಏಕೀಕರಣ ಸಮಿತಿ ಮತ್ತು ಸುಪ್ರೀಂಕೋರ್ಟ್‌ಗೆ ನೀಡಿದ್ದ ಭರವಸೆಯ ಮೇಲೆ ವಿಶ್ವಾಸ ಇರಿಸಿದ್ದರು. ಇದರಿಂದ ಕಲ್ಯಾಣ್‌ಸಿಂಗ್ ನೇತೃತ್ವದ ಉತ್ತರ ಪ್ರದೇಶ ಸರಕಾರಕ್ಕೆ ಪರಿಸ್ಥಿತಿಯನ್ನು ನಿರ್ವಹಿಸಲು ಮುಕ್ತ ಅವಕಾಶ ನೀಡಿದಂತಾಯಿತು. ಕಾನೂನನ್ನು ಕೈಗೆತ್ತಿಕೊಳ್ಳಲು ಮತ್ತು ಬಾಬರಿ ಮಸೀದಿಯನ್ನು ನೆಲಸಮಗೊಳಿಸಲು ಸರಕಾರ ಕರಸೇವಕರಿಗೆ ಅವಕಾಶ ಮಾಡಿಕೊಟ್ಟಿದ್ದರಲ್ಲಿ ಆಶ್ಚರ್ಯವೇನಿಲ್ಲ. ಸಂವಿಧಾನದ ಪ್ರಕಾರ ರಾಜ್ಯ ಸರಕಾರ ನಿರ್ವಹಿಸಬೇಕಿದ್ದ ಜವಾಬ್ದಾರಿಗೆ ಬದ್ಧವಾಗಲಿಲ್ಲ.
ಆದರೆ ಕೇಂದ್ರ ಸರಕಾರ ಮಾತ್ರವಲ್ಲ, ಸಂವಿಧಾನದಡಿ ಕಾರ್ಯ ನಿರ್ವಹಿಸುವ ಇತರ ಸಂಸ್ಥೆಗಳೂ ತಮ್ಮ ಬದ್ಧತೆಯನ್ನು ನಿಭಾಯಿಸಿಲ್ಲ. ಉತ್ತರ ಪ್ರದೇಶದ ಆಗಿನ ರಾಜ್ಯಪಾಲ ಸತ್ಯನಾರಾಯಣ ರೆಡ್ಡಿ ರಾಜ್ಯದಲ್ಲಿ ನೆಲೆಸಿದ್ದ ಪರಿಸ್ಥಿತಿಯನ್ನು ಅಂದಾಜಿಸುವಲ್ಲಿ ದಯನೀಯ ವೈಫಲ್ಯ ಕಂಡಿದ್ದರು. ಅಲ್ಲದೆ ಉತ್ತರಪ್ರದೇಶದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸುವುದು ಬೇಡ ಎಂದು ಸಲಹೆ ಮಾಡಿದ್ದರು ಎಂದು ಗೋಡ್ಬೋಲೆ ಆರೋಪಿಸಿದ್ದಾರೆ.
ಅಂತಿಮವಾಗಿ, 1950ರಿಂದಲೂ ನೆನೆಗುದಿಗೆ ಬಿದ್ದಿರುವ ಈ ಪ್ರಕರಣವನ್ನು ಇತ್ಯರ್ಥಪಡಿಸುವಲ್ಲಿ ನ್ಯಾಯಾಂಗದ ವೈಫಲ್ಯವೂ ಇದೆ . ರಾಜಕೀಯ ಮತ್ತು ಧರ್ಮವನ್ನು ಸಮ್ಮಿಶ್ರಗೊಳಿಸಿರುವುದು ಈ ವಿವಾದದ ಬೆಂಕಿಗೆ ತುಪ್ಪ ಸುರಿದಿದೆ ಎಂದವರು ಹೇಳಿದ್ದಾರೆ.
ಬಾಬರಿ ಮಸೀದಿ ಧ್ವಂಸವಾದ ಬಳಿಕ, 1993ರ ಮಾರ್ಚ್‌ನಲ್ಲಿ ಗೋಡ್ಬೋಲೆ ಸ್ವಯಂ ನಿವೃತ್ತಿ ಪಡೆದರು.