ದಿಲ್ಲಿಯಲ್ಲಿ ಗಂಭೀರ ಸ್ಥಿತಿಗೆ ಇಳಿಕೆಯಾದ ವಾಯು ಗುಣಮಟ್ಟ

ಹೊಸದಿಲ್ಲಿ, ನ. 4: ನಗರದ ವಿವಿಧ ಭಾಗಗಳಲ್ಲಿ ರವಿವಾರ ಬೆಳಗ್ಗೆ ಹೊಗೆಯ ದಪ್ಪದ ಪದರು ಆವರಿಸಿರುವುದರಿಂದ ದೃಗ್ಗೋಚರ ಗಮನಾರ್ಹ ಇಳಿಕೆಯಾಗಿದೆ ಹಾಗೂ ಹೊಸದಿಲ್ಲಿಯಲ್ಲಿ ವಾಯು ಮಾಲಿನ್ಯದ ಮಟ್ಟ ಅಪಾಯಕಾರಿಯಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ನೋಯ್ಡೆದಲ್ಲಿ ಶಾಲೆಗಳಿಗೆ ಎರಡು ದಿನಗಳ ರಜೆ ಘೋಷಿಸಿದೆ.
ಈ ಋತುವಿನಲ್ಲಿ ಗಮನಾರ್ಹವಾಗಿ ವಾಯು ಗುಣಮಟ್ಟ ಸೂಚ್ಯಂಕ ಮುಂಜಾನೆ ಲಘು ಹನಿ ಮಳೆಯ ಹೊರತಾಗಿಯೂ ಬೆಳಗ್ಗೆ 10 ಗಂಟೆಗೆ 625ಕ್ಕೆ ತಲುಪಿತ್ತು.
ವಾಯು ಗುಣಮಟ್ಟ ಸೂಚ್ಯಂಕವನ್ನು 0-50ರ ನಡುವೆ ಉತ್ತಮ, 51-100 ತೃಪ್ತಿಕರ, 101-200 ಮಧ್ಯಮ, 201-300 ಕಳಪೆ, 301-400 ಅತಿ ಕಳಪೆ ಹಾಗೂ 401-500 ಗಂಭೀರ ಎಂದು ಪರಿಗಣಿಸಲಾಗುತ್ತದೆ. ವಾಯು ಗುಣಮಟ್ಟ ಸೂಚ್ಯಂಕ 500ಕ್ಕಿಂತ ಮೇಲೆ ದಾಖಲಾಗಿದ್ದರೆ ಗಂಭೀರ ಹಾಗೂ ತುರ್ತು ವರ್ಗದಲ್ಲಿ ಪರಿಗಣಿಸಲಾಗುತ್ತದೆ.
ವಾಯು ಗುಣಮಟ್ಟ ಸೂಚ್ಯಂಕ ದಿರ್ಫುರ್‌ನಲ್ಲಿ 509, ದಿಲ್ಲಿ ವಿಶ್ವವಿದ್ಯಾನಿಲಯ ಪ್ರದೇಶದಲ್ಲಿ 591, ಚಾಂದಿನಿ ಚೌಕ ಪ್ರದೇಶದಲ್ಲಿ 432 ಹಾಗೂ ಲೋಧಿ ರೋಡ್‌ನಲ್ಲಿ 537 ದಾಖಲಾಗಿದೆ.
ಹೊಸದಿಲ್ಲಿ ಹೊರತುಪಡಿಸಿ ಉತ್ತರಪ್ರದೇಶದ ಗಾಝಿಯಾಬಾದ್ ಹಾಗೂ ನೋಯ್ಡ ಕೂಡ ಗಂಭೀರ ವಾಯು ಮಾಲಿನ್ಯಕ್ಕೆ ತುತ್ತಾಗಿದೆ. ಈ ಎರಡೂ ಪ್ರದೇಶಗಳಲ್ಲಿ ವಾಯು ಗುಣಮಟ್ಟ ಸೂಚ್ಯಾಂಕ 600 ದಾಟಿದೆ.
32 ವಿಮಾನಗಳ ಪಥ ಬದಲಾವಣೆ
ದಟ್ಟ ಹೊಗೆ ಆವರಿಸಿಕೊಂಡಿರುವುದರಿಂದ ಕಡಿಮೆ ದೃಗ್ಗೋಚರದ ಕಾರಣಕ್ಕೆ ರವಿವಾರ ಬೆಳಗ್ಗೆ ದಿಲ್ಲಿ ವಿಮಾನ ನಿಲ್ದಾಣದಿಂದ 32 ವಿಮಾನಗಳ ಪಥ ಬದಲಾಯಿಸಲಾಯಿತು.
ದಟ್ಟ ಹೊಗೆಯಿಂದ ವಿಮಾನಗಳ ಸಂಚಾರಕ್ಕೆ ತೊಂದರೆ ಉಂಟಾಗಿದೆ. ವಿಮಾನಗಳ ಸಂಚಾರದ ಬದಲಾದ ಸಮಯ ತಿಳಿಯಲು ವಿಮಾನ ನಿಲ್ದಾಣ ಸಂಪರ್ಕಿಸುವಂತೆ ದಿಲ್ಲಿ ವಿಮಾನ ನಿಲ್ದಾಣದ ನಿರ್ವಾಹಕರು ಟ್ವೀಟ್ ಮಾಡಿದ್ದರು.
‘‘ಪ್ರತಿಕೂಲ ಹವಾಮಾನದಿಂದ ಟಿ3 ವಿಮಾನ ನಿಲ್ದಾಣ (ದಿಲ್ಲಿ)ದಿಂದ ಬೆಳಗ್ಗೆ 9 ಗಂಟೆಯಿಂದ ವಿಮಾನ ಹಾರಾಟಕ್ಕೆ ಅಡ್ಡಿ ಉಂಟಾಯಿತು. 12 ವಿಮಾನಗಳನ್ನು ಜೈಪುರ, ಅಮೃತರಸರ ಹಾಗೂ ಲಕ್ನೋಗೆ ಪಥ ಬದಲಾಯಿಸಲಾಯಿತು’’ ಎಂದು ಏರ್ ಇಂಡಿಯಾದ ವಕ್ತಾರ ಹೇಳಿದ್ದಾರೆ.
ಪರಿಹಾರ ನೀಡಲು ಕೂಡಲೇ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಟ್ವೀಟ್ ಮಾಡಿ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ.