ಇಸ್ರೇಲ್-ಭಾರತದ ನಡುವೆ ಬೇಹುಗಾರಿಕಾ ಸಹಕಾರವಿದೆ: ಗೂಢಚರ್ಯೆ ಸಂಸ್ಥೆ 'ಮೊಸ್ಸಾದ್' ಮಾಜಿ ಮುಖ್ಯಸ್ಥ
ಸ್ಪೈವೇರ್ ದಾಳಿ ಹಿನ್ನೆಲೆಯಲ್ಲಿ ಕುತೂಹಲ ಕೆರಳಿಸಿದ ಹೇಳಿಕೆ
ಹೊಸದಿಲ್ಲಿ, ನ.4: ಇಸ್ರೇಲ್ ಮತ್ತು ಭಾರತದ ನಡುವೆ ಬಹಳ ವರ್ಷಗಳಿಂದ ಗುಪ್ತಚರ ಸಹಕಾರವಿದ್ದು ಇದು ಎರಡೂ ದೇಶಗಳಿಗೆ ಪ್ರಯೋಜನಕಾರಿಯಾಗಿದೆ ಎಂದು ಇಸ್ರೇಲಿನ ರಾಷ್ಟ್ರೀಯ ಗುಪ್ತಚರ ಏಜನ್ಸಿ ಮೊಸ್ಸಾದ್ ನ ಮಾಜಿ ಮುಖ್ಯಸ್ಥ ಉಝಿ ಅರದ್ ತಮ್ಮ ಇತ್ತೀಚಿಗಿನ ಭಾರತ ಭೇಟಿಯ ವೇಳೆ ಹೇಳಿರುವುದು ಪೆಗಾಸಸ್ ಸ್ಪೈವೇರ್ ಹಗರಣದ ಹಿನ್ನೆಲೆಯಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ.
ಇಸ್ರೇಲ್ ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರನಾಗಿರುವ ಉಝಿ ಅರದ್ ಖ್ಯಾತ ವಿದೇಶಾಂಗ ವ್ಯವಹಾರಗಳ ಹಾಗೂ ಭದ್ರತಾ ವಿಷಯಗಳ ತಜ್ಞರೂ ಆಗಿದ್ದು ಬೆಂಗಳೂರಿನ ಸಿನೆರ್ಜಿಯಾ ಫೌಂಡೇಶನ್ ಆಯೋಜಿಸಿದ್ದ ಸಿನೆರ್ಜಿಯಾ ಕಾಂಕ್ಲೇವ್ ನಲ್ಲಿ ಭಾಗವಹಿಸಲು ಇತ್ತೀಚೆಗೆ ಆಗಮಿಸಿದ್ದರು.
ಈ ಸಂದರ್ಭ thequint.com ಜತೆ ಮಾತನಾಡಿದ ಅವರು, ಭಾರತ ಇಸ್ರೇಲ್ ನಡುವೆ ಬಹಳ ಹಿಂದಿನಿಂದಲೂ ಉತ್ತಮ ಗುಪ್ತಚರ ಪಾಲುದಾರಿಕೆಯಿದೆ ಎಂದರಾದರೂ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದರು.
ಇಸ್ರೇಲಿ ಬೇಹುಗಾರಿಕಾ ಏಜನ್ಸಿ ಜಗತ್ತಿನ ಅತ್ಯುತ್ತಮ ಬೇಹುಗಾರಿಕಾ ಏಜನ್ಸಿ ಎಂದು ಕರೆದುಕೊಳ್ಳಲು ಕಾರಣವೇನೆಂದು ಕೇಳಿದಾಗ "ಒಬ್ಬ ಬೇಹುಗಾರ ಯಾವತ್ತೂ ಕೊಚ್ಚಿಕೊಳ್ಳಬಾರದು'' ಎಂದು ಹೇಳುತ್ತಾ ತಮ್ಮನ್ನು ಅತ್ಯುತ್ತಮ ಎನ್ನುವ ಬದಲು ಕನಿಷ್ಠ ಕೆಟ್ಟವ ಎಂದು ಬಣ್ಣಿಸಿದರು.