ಬೆಂಗಳೂರು: ಆರ್‌ಸಿಇಪಿ ಒಪ್ಪಂದ ಖಂಡಿಸಿ ಕಿಸಾನ್ ಕಾಂಗ್ರೆಸ್ ‘ರೈಲ್ ರೋಕೋ’ ಚಳವಳಿ

ಬೆಂಗಳೂರು, ನ.4: ಪ್ರಾದೇಶಿಕ ಆರ್ಥಿಕ ಸಹಭಾಗಿತ್ವ(ಆರ್‌ಸಿಇಪಿ) ಹಾಗೂ ಮುಕ್ತ ವ್ಯಾಪಾರ ನೀತಿಗೆ ಸಹಿ ಹಾಕಲು ಮುಂದಾಗಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ, ರೈತರ ಪಾಲಿಗೆ ಮರಣ ಶಾಸನ ಬರೆಯಲು ಹೊರಟಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆರೋಪಿಸಿದರು.
ಸೋಮವಾರ ನಗರದ ಕಾಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ ಆರ್‌ಸಿಇಪಿ ಹಾಗೂ ಮುಕ್ತ ವ್ಯಾಪಾರ ನೀತಿಯನ್ನು ಖಂಡಿಸಿ ಕೆಪಿಸಿಸಿ ಕಿಸಾನ್ ಘಟಕದ ವತಿಯಿಂದ ಆಯೋಜಿಸಲಾಗಿದ್ದ ‘ರೈಲ್ ರೋಕೋ’ ಚಳವಳಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ರೈತರ ಬದುಕಿಗೆ ಕೊಡಲಿ ಏಟು ಹಾಕಿ ಅವರನ್ನು ಮುಗಿಸುವ ಷಡ್ಯಂತ್ರವನ್ನು ಬಿಜೆಪಿಯ ಕೇಂದ್ರ ಸರಕಾರ ಮಾಡುತ್ತಿದೆ. ಆರ್‌ಸಿಇಪಿ ಹಾಗೂ ಮುಕ್ತ ವ್ಯಾಪಾರ ನೀತಿ ವಿರುದ್ಧ ಹೋರಾಟ ನಡೆಸುವಂತೆ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಹೋರಾಟಕ್ಕೆ ಕರೆ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಒಂದೆಡೆ ಬರಗಾಲ, ನೆರೆ, ಪ್ರವಾಹದ ಪರಿಸ್ಥಿತಿ. ರೈತರ ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಕೊಡಲು ಕೇಂದ್ರ ಸರಕಾರ ವಿಫಲವಾಗಿದೆ. ದಿನೇ ದಿನೇ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ರೈತರು ಬೆಳೆಯುವ ಕೃಷಿ ಉತ್ಪನ್ನಗಳ ಬೆಲೆ ಕುಸಿದರೆ ಆತ ಏನು ಮಾಡಬೇಕು ಎಂದು ಈಶ್ವರ್ ಖಂಡ್ರೆ ಪ್ರಶ್ನಿಸಿದರು.
ಮುಕ್ತ ವ್ಯಾಪಾರ ನೀತಿ ಜಾರಿಗೆ ಬಂದಲ್ಲಿ ಆಮದು ಮಾಡಿಕೊಳ್ಳುವ ಉತ್ಪನ್ನಗಳ ಮೇಲಿನ ಸುಂಕ ಶೂನ್ಯಕ್ಕೆ ಇಳಿಯುತ್ತದೆ. ಇದರಿಂದಾಗಿ, ಹೈನುಗಾರಿಕೆ, ಮೀನುಗಾರಿಕೆ, ಕೃಷಿ, ತೋಟಗಾರಿಕೆ ಸೇರಿದಂತೆ ಇನ್ನಿತರ ಉತ್ಪನ್ನಗಳ ಬೆಲೆ ಕುಸಿಯುತ್ತದೆ. ಹಾಲಿನ ದರ ಲೀಟರ್‌ಗೆ 10 ರೂ.ಆಗಬಹುದು. ಸಣ್ಣ ಹಾಗೂ ಗುಡಿ ಕೈಗಾರಿಕೆ ಕ್ಷೇತ್ರಗಳ ಪ್ರಗತಿ ಕುಂಠಿತವಾಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಈಗಾಗಲೇ ಸಕ್ಕರೆ ಆಮದು ಮಾಡಿಕೊಳ್ಳಲು ಅವಕಾಶ ಕೊಟ್ಟ ಪರಿಣಾಮ, ಸಕ್ಕರೆ ಬೆಲೆ ಕುಸಿದು ಕಬ್ಬು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದೇಶದಲ್ಲಿ ಸುಮಾರು 10 ಕೋಟಿ ಹಾಲು ಉತ್ಪಾದಕರಿದ್ದಾರೆ. ನಮ್ಮ ರಾಜ್ಯದಲ್ಲಿ ಪ್ರತಿದಿನ 80-90 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಈ ರೈತರು ಎಲ್ಲಿಗೆ ಹೋಗಬೇಕು ಎಂದು ಅವರು ಪ್ರಶ್ನಿಸಿದರು.
ರೈತರನ್ನು ಬೀದಿಗೆ ತರುವ ತಂತ್ರವನ್ನು ಮೋದಿ ಸರಕಾರ ಮಾಡಿದೆ. ಈ ಒಪ್ಪಂದದಿಂದ ವಿದೇಶದ ಬಹುರಾಷ್ಟ್ರೀಯ ಕಂಪೆನಿಗಳು ನಮ್ಮ ದೇಶದಲ್ಲಿನ ಕೃಷಿ ಭೂಮಿಯನ್ನು ಖರೀದಿ ಮಾಡಲು ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಈ ಬಗ್ಗೆ ನಾವು ಜಾಗೃತರಾಗಿ ಹೋರಾಟ ಮಾಡಬೇಕು ಎಂದು ಈಶ್ವರ್ ಖಂಡ್ರೆ ಹೇಳಿದರು.
ಬಹಿರಂಗ ಹೇಳಿಕೆ ಕೊಡಬೇಕು: ಪ್ರಾದೇಶಿಕ ಆರ್ಥಿಕ ಸಹಭಾಗಿತ್ವ ಹಾಗೂ ಮುಕ್ತ ವ್ಯಾಪಾರ ನೀತಿ ವಿರುದ್ಧ ನಿರಂತರ ಹೋರಾಟ ಅಗತ್ಯವಿದೆ. ಇವತ್ತು ಈ ಒಪ್ಪಂದಕ್ಕೆ ಸಹಿ ಹಾಕುವುದನ್ನು ಮುಂದೂಡಿದರೂ, ವಿಯೆಟ್ನಾಂನಲ್ಲಿ ಮುಂದಿನ ವರ್ಷ ಮತ್ತೆ ಸಭೆ ಕರೆಯಬಹುದು. ಕೇಂದ್ರ ಸರಕಾರ ಲೋಕಸಭೆ ಅಥವಾ ಜನರ ಮುಂದೆ ಈ ಒಪ್ಪಂದಕ್ಕೆ ಸಹಿ ಮಾಡುವುದಿಲ್ಲವೆಂದು ಬಹಿರಂಗ ಹೇಳಿಕೆ ಕೊಡುವವರೆಗೆ ನಾವು ನಿರಂತರ ಹೋರಾಟ ಮಾಡಬೇಕು ಎಂದು ಈಶ್ವರ್ ಖಂಡ್ರೆ ತಿಳಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮೀಗಾ, ಮಾಜಿ ಸಚಿವ ಎಚ್.ಎಂ.ರೇವಣ್ಣ, ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಮಾಜಿ ಮೇಯರ್ ಎಂ.ರಾಮಚಂದ್ರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಆರ್‌ಸಿಇಪಿ ಹಾಗೂ ಮುಕ್ತ ವ್ಯಾಪಾರ ನೀತಿ ಕುರಿತು ಯಾಕೆ ಬಹಿರಂಗ ಚರ್ಚೆಯಾಗುತ್ತಿಲ್ಲ. ಎಲ್ಲವನ್ನೂ ಕತ್ತಲಲ್ಲಿ ಇಡಲಾಗಿದೆ. ಈ ನೀತಿಯಿಂದಾಗಿ ಮೋದಿ ಸ್ನೇಹಿತರಾದ ಅದಾನಿಗೆ ಲಾಭವಾಗಲಿದೆ. ಒಬ್ಬ ಉದ್ಯಮಿಗೆ ಸಾವಿರಾರು ಕೋಟಿ ರೂ.ಲಾಭ ಮಾಡಿಕೊಡಲು, ಕೋಟ್ಯಂತರ ರೈತರನ್ನು ಬೀದಿಗೆ ತರುವ, ಅವರು ಆತ್ಮಹತ್ಯೆಯ ಮೊರೆ ಹೋಗುವ ಕೆಲಸವನ್ನು ಮೋದಿ ಸರಕಾರ ಮಾಡುತ್ತಿದೆ.
-ಈಶ್ವರ್ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ







