ಹೊಸಕೋಟೆ ನಗರಕ್ಕೂ ಮೆಟ್ರೋ ವಿಸ್ತರಣೆ: ಸಿಎಂ ಯಡಿಯೂರಪ್ಪ ಭರವಸೆ

ಬೆಂಗಳೂರು, ನ. 4: ನಮ್ಮ ಮೆಟ್ರೋವನ್ನು ಹೊಸಕೋಟೆ ನಗರಕ್ಕೂ ವಿಸ್ತರಿಸಲು ಕೇಂದ್ರ ಸರಕಾರದಿಂದ ಅನುಮತಿ ಕೊಡಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಭರವಸೆ ನೀಡಿದ್ದಾರೆ.
ಸೋಮವಾರ ಹೊಸಕೋಟೆ ಕೆರೆ ತುಂಬಿಸುವ ಏತ ನೀರಾವರಿ ಯೋಜನೆ ಸೇರಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಮತ್ತೆ ಹೊಸಕೋಟೆ ನಗರಕ್ಕೆ ಆಗಮಿಸಿ ನಮ್ಮ ಮೆಟ್ರೋ ಯೋಜನೆ ವಿಸ್ತರಣೆಗೆ ಶಂಕುಸ್ಥಾಪನೆ ಮಾಡುತ್ತೇನೆ ಎಂದು ಪ್ರಕಟಿಸಿದರು.
ಹೊಸಕೋಟೆ ಪಟ್ಟಣಕ್ಕೆ ಸಂಚಾರ ಪೊಲೀಸ್ ಠಾಣೆ ಮಂಜೂರಾತಿಗೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಅಭಿವೃದ್ಧಿ ಕಾರ್ಯಕ್ಕೆ ರಾಜ್ಯ ಸರಕಾರದಲ್ಲಿ ಹಣಕಾಸಿನ ಸಮಸ್ಯೆ ಇಲ್ಲ ಎಂದು ಬಿಎಸ್‌ವೈ ಇದೇ ವೇಳೆ ಸ್ಪಷ್ಟಣೆ ನೀಡಿದರು.
ಏನು ಬೇಕು ಹೇಳಿ: ಎಂಟಿಬಿ ನಾಗರಾಜ್ ಏಕು ಕೇಳಿದರೂ ನೀಡುತ್ತೇನೆ. ಹೊಸಕೋಟೆ ಸೇರಿದಂತೆ ರಾಜ್ಯದ ಎಲ್ಲ ಕ್ಷೇತ್ರಗಳಿಗೆ ಆದ್ಯತೆ ಮೇಲೆ ಅನುದಾನ ಬಿಡುಗಡೆ ಮಾಡಲಾಗುವುದು. ಎಂಟಿಬಿಯವರಿಗೆ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಿಕೊಟ್ಟಿದ್ದರೆ ಮೈತ್ರಿ ಸರಕಾರದಲ್ಲಿ ಅವರು ರಾಜೀನಾಮೆ ನೀಡುವ ಪ್ರಸಂಗವೇ ಬರುತ್ತಿರಲಿಲ್ಲ ಎಂದರು.
ಎಂಟಿಬಿ ನಾಗರಾಜ್ ಅವರು ಯಾವುದೇ ಪಕ್ಷದಿಂದ ನಿಲ್ಲಲಿ ಅಥವಾ ಪಕ್ಷೇತರ ಅಭ್ಯರ್ಥಿಯಾದರೂ ಪರವಾಗಿಲ್ಲ. ಅವರಂತಹ ಶಾಸಕರು ಆಯ್ಕೆ ಆಗಬೇಕು ಎಂದ ಯಡಿಯೂರಪ್ಪ, ಇಂತಹ ಪ್ರಮಾಣಿಕ ವ್ಯಕ್ತಿ ಶಾಸಕನಾಗಬೇಕು. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಮಾದರಿಯಲ್ಲೆ ಹೊಸಕೋಟೆ ಕ್ಷೇತ್ರ ಅಭಿವೃದ್ಧಿಯಾಗಬೇಕು ಎಂದರು.
ನಮ್ಮದು ಕನಕಪುರ ಬಂಡೆ ಅಲ್ಲ: ‘ಬಿಎಸ್‌ವೈ ನೇತೃತ್ವದ ಸರಕಾರ ಮೂರೂವರೆ ವರ್ಷ ಆಡಳಿತ ನಡೆಸಲಿದ್ದು, ಬಿಜೆಪಿ ಸರಕಾರವನ್ನು ಅಲ್ಲಾಡಿಸಲು ಸಾಧ್ಯವಿಲ್ಲ. ನಮ್ಮ ಸರಕಾರ ಕನಕಪುರ ಬಂಡೆ ಅಲ್ಲ, ನಾವು ಅಲ್ಲಾಡುವುದಿಲ್ಲ’ ಎಂದು ಸಚಿವ ಆರ್.ಅಶೋಕ್ ಹೇಳಿದರು. ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಅನರ್ಹ ಶಾಸಕ ಎಂಟಿಸಿ ನಾಗರಾಜ್ ಸೇರಿದಂತೆ ಸ್ಥಳೀಯ ಮುಖಂಡರು ಪಾಲ್ಗೊಂಡಿದ್ದರು.
ಸೇಬಿಗಾಗಿ ಸೆಣಸಾಟ: ‘ವಿವಿಧ ಕಾಮಗಾರಿ ಶಂಕುಸ್ಥಾಪನೆಗೆ ಆಗಮಿಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ 800 ಕೆ.ಜಿ. ತೂಕದ ಬೃಹತ್ ಸೇಬು ಹಣ್ಣಿನ ಹಾರವನ್ನು ಕ್ರೇನ್ ಮೂಲಕ ಹಾಕಲಾಯಿತು. ಈ ವೇಳೆ ಕಾರ್ಯಕ್ರಮದಲ್ಲಿ ನೆರೆದಿದ್ದ ಜನತೆ ಸೇಬು ಹಣ್ಣು ಕಿತ್ತುಕೊಳ್ಳಲು ಅಕ್ಷರಶಃ ಸೆಣಸಾಟ ನಡೆಸಿದರು’.
ಅಪ್ಪ-ಮಗ ಗೈರು: ‘ಮುಖ್ಯಮಂತ್ರಿ ಯಡಿಯೂರಪ್ಪ ಪಾಲ್ಗೊಂಡಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಸಂಸದ ಬಿ.ಎನ್. ಬಚ್ಚೇಗೌಡ ಹಾಗೂ ಅವರ ಪುತ್ರ, ಬಿಜೆಪಿ ಯುವಮೋರ್ಚಾ ರಾಜ್ಯ ಕಾರ್ಯದರ್ಶಿ ಶರತ್ ಬಚ್ಚೇಗೌಡ ಗೈರು ಹಾಜರಿ ಎದ್ದು ಕಾಣುತ್ತಿತ್ತು.







