ಕಾರ್ಖಾನೆಯಿಂದ ಬೆಳ್ಳಿ ಕಳವು ಪ್ರಕರಣ: ಕಾರ್ಮಿಕನ ಬಂಧನ

ಬೆಂಗಳೂರು, ನ.4: ಕಾರ್ಖಾನೆಯೊಂದರಲ್ಲಿ 16 ಕೆಜಿ ಬೆಳ್ಳಿ ಕಳವು ಮಾಡಿದ ಆರೋಪದಡಿ ಕಾರ್ಮಿಕನೋರ್ವನನ್ನು ಇಲ್ಲಿನ ಶ್ರೀರಾಂಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರದ ಸೊಲ್ಲಾಪುರ ಮೂಲದ ಬಾಪು(26) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ನಗರದ ಶ್ರೀರಾಂಪುರ ವ್ಯಾಪ್ತಿಯ ಆರ್ಮುಗಂ ಸಿಲ್ವರ್ ವರ್ಕ್ ಕಾರ್ಖಾನೆಯಲ್ಲಿ ಆರೋಪಿ ಬಾಪು, ಬೆಳ್ಳಿ ಕರಗಿಸುವ ಕೆಲಸ ಮಾಡುತ್ತಿದ್ದ. ಮಾಲಕರು ಬೆಳ್ಳಿಯನ್ನು ಕರಗಿಸಲು ಕೊಡುತ್ತಿದ್ದ ವೇಳೆ ಸ್ವಲ್ಪಬೆಳ್ಳಿಯನ್ನು ಕಳವು ಮಾಡುತ್ತಿದ್ದು, ಒಂದು ವರ್ಷದಿಂದ ಈ ಕೃತ್ಯವೆಸಗಿರುವುದಾಗಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.
ಬೆಳ್ಳಿ ಕಳವು ಆಗುತ್ತಿರುವ ಬಗ್ಗೆ ಅನುಮಾನ ಬಂದು ಆರ್ಮುಗಂ ಅವರು ಬೆಳ್ಳಿಯನ್ನು ತೂಕ ಮಾಡಿ ಕರಗಿಸಲು ಕೊಟ್ಟು ನಂತರ ತೂಕವನ್ನು ಪರಿಶೀಲಿಸಿದಾಗ ಸ್ವಲ್ಪ ಭಾಗ ಕಳವು ಮಾಡಿರುವುದು ಕಂಡು ಬಂದಿದೆ ಎನ್ನಲಾಗಿದೆ.
ಈ ಸಂಬಂಧ ಪೊಲೀಸರಿಗೆ ದೂರು ನೀಡಿದಾಗ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ, 16 ಕೆಜಿ ಬೆಳ್ಳಿ ಜಪ್ತಿ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.





