ಮಣಿಪಾಲ: ನ.9ರಿಂದ ಮಾಹೆ ಸಾಹಿತ್ಯ ಹಬ್ಬ ‘ಮಿಲಾಪ್-2019’
ಉಡುಪಿ, ನ.4: ಮಣಿಪಾಲದ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್‌ನ (ಮಾಹೆ) ಮೂರನೇ ವಾರ್ಷಿಕ ಸಾಹಿತ್ಯ ಹಬ್ಬ ‘ಮಿಲಾಪ್- 2019’ (ಮಣಿಪಾಲ ಅಂತಾರಾಷ್ಟ್ರೀಯ ಸಾಹಿತ್ಯ ಮತ್ತು ಕಲಾ ವೇದಿಕೆ)ನ್ನು ಇದೇ ನ.9 ಮತ್ತು 10ರಂದು ಮಣಿಪಾಲ ಕೆಎಂಸಿಯ ಡಾ.ಟಿಎಂಎ ಪೈ ಸಭಾಂಗಣ ದಲ್ಲಿ ಆಯೋಜಿಸಿದೆ ಎಂದು ಮಾಹೆಯ ಯುರೋಪಿಯನ್ ಅಧ್ಯಯನ ವಿಭಾಗ ಹಾಗೂ ಮಣಿಪಾಲ ಯುನಿವರ್ಸಲ್ ಪ್ರೆಸ್‌ನ ಮುಖ್ಯಸ್ಥೆ, ಕಾರ್ಯಕ್ರಮದ ಸಂಜಕಿ ಡಾ.ನೀತಾ ಇನಾಂದಾರ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಮಟ್ಟದ ಸಾಹಿತಿಗಳು, ಕಲಾವಿದರು, ಬರಹಗಾರರು, ನಾಟಕಕಾರ ರು ಎರಡು ದಿನಗಳ ಕಾಲ ಮಣಿಪಾಲದಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಸಾಹಿತ್ಯ-ಕಲಾ ಸಮ್ಮೇಳನದಲ್ಲಿ ಪಾಲ್ಗೊಳ್ಳುವರು. ಇದರೊಂದಿಗೆ ಪುಸ್ತಕ ಪ್ರದರ್ಶನ ಹಾಗೂ ಸಾಂಸ್ಕೃತಿಕ ಪ್ರದರ್ಶನವನ್ನೂ ಆಯೋಜಿಸಲಾಗಿದೆ ಎಂದರು.
ಸಮ್ಮೇಳನವನ್ನು ನ.9ರ ಶನಿವಾರ ಬೆಳಗ್ಗೆ 9:30ಕ್ಕೆ ಆಂಗ್ಲ ಭಾಷಾ ನಾಟಕಕಾರ, ನಟ, ನಿರ್ದೇಶಕ ಹಾಗೂ ಲೇಖಕ ಮಹೇಶ್ ದತ್ತಾನಿ ಉದ್ಘಾಟಿಸಲಿದ್ದಾರೆ. ಮಾಹೆಯ ಕುಲಪತಿ ಡಾ.ಎಚ್.ವಿನೋದ್ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮಾಹೆಯ ಮಣಿಪಾಲ ಯುನಿವರ್ಸಲ್ ಪ್ರೆಸ್ (ಎಂಯುಪಿ) ಪ್ರಕಾಶನ ಸಂಸ್ಥೆ ಪ್ರಕಟಿಸುವ ಕನ್ನಡಿಗರಾದ ಪ್ರೊ.ಎಚ್.ಎಸ್. ಶಿವಪ್ರಕಾಶ್, ಪ್ರೊ.ಎನ್.ಮನು ಚಕ್ರವರ್ತಿ ಹಾಗೂ ಡಾ.ಸಯನ್ ಡೇ ಅವರ ಮೂರು ಕೃತಿಗಳನ್ನು ಬಿಡುಗಡೆಗೊಳಿಸಲಾಗುವುದು.
ಬಳಿಕ ಎರಡು ದಿನಗಳ ಕಾಲ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ಸಂಪನ್ಮೂಲ ವ್ಯಕ್ತಿಗಳ ಉಪಸ್ಥಿತಿಯಲ್ಲಿ ಸಂವಾದ, ವಿಚಾರಸಂಕಿರಣ ವನ್ನು ಆಯೋಜಿಸಲಾಗುತ್ತಿದೆ. ಸಮ್ಮೇಳನದಲ್ಲಿ ಪುಸ್ತಕ ಪ್ರದರ್ಶನವನ್ನು ಎನ್. ಮನು ಚಕ್ರವರ್ತಿ ಹಾಗೂ ಕಮಲಾಕರ ಭಟ್ ಉದ್ಘಾಟಿಸಲಿದ್ದಾರೆ ಎಂದರು.
ನ.9ರಂದು11:15ರಿಂದ ಗಿರೀಶ್ ಕಾರ್ನಾಡ ಕುರಿತು ಚರ್ಚಾ ಕಾರ್ಯಕ್ರಮ ವಿದೆ. ಇದರಲ್ಲಿ ಬಿ.ಆರ್.ವೆಂಕಟರಮಣ ಐತಾಳ್, ಅಮೃತ ಗಂಗಾರ್, ಪ್ರಕಾಶ್ ಬೆಳವಾಡಿ ಹಾಗೂ ಟಿ.ಪಿ.ಅಶೋಕ್ ಭಾಗವಹಿಸಲಿದ್ದಾರೆ. ‘ಡಿಜಿಟಲ್ ಡಿಕೋಡಿಂಗ್’ ಕುರಿತ ಚರ್ಚೆಯಲ್ಲಿ ಚಂದನ ಗೌಡ, ಲಾವಣ್ಯ ಲಕ್ಷ್ಮೀನಾರಾಯಣ ಹಾಗೂ ಶೇಖರ ಮುಖರ್ಜಿ ಭಾಗವಹಿಸಲಿದ್ದಾರೆ.
ನ.10ರಂದು ಸಂಜೆ 4:00ಕ್ಕೆ ಕನ್ನಡದ ಖ್ಯಾತ ಲೇಖಕರು, ಸಾಹಿತಿಗಳಾದ ಎನ್.ಮನು ಚಕ್ರವರ್ತಿ, ಜಿ.ಎನ್.ಮೋಹನ್, ಮುರಳೀಧರ ಉಪಾಧ್ಯ ಹಾಗೂ ನೀತಾ ಇನಾಂದಾರ್ ಅವರು ಡಿಜಿಟಲ್ ಮೀಡಿಯಂ ಕುರಿತು ಚರ್ಚೆ ನಡೆಸುವರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನ.9ರ ಸಂಜೆ 6:00ಗಂಟೆಗೆ ಆರತಿ ತಿವಾರಿ ಅವರ ಪ್ರಸಿದ್ಧ ನಾಟಕ ‘ಮನ್ಸಾ ಕಿ ಶಾದಿ’ ಪ್ರದರ್ಶನಗೊಂಡರೆ, ನ.10ರ ಸಂಜೆ 6:30ಕ್ಕೆ ಹೆಗ್ಗೋಡಿನ ನೀನಾಸಂ ಅವರ ತಿರುಗಾಟದ ನಾಟಕ ಗಿರೀಶ್ ಕಾರ್ನಾಡರ ‘ರಾಕ್ಷಸ ತಂಗಡಿ’ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಡಾ.ನೀತಾ ಇನಾಂದಾರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎಂಯುಪಿಯ ರೇವತಿ ನಾಡಿಗೇರ್, ತನ್ಮಾ ನಿಗಂ, ಡಾ.ಶ್ರೀನಿವಾಸ ಆಚಾರ್ಯ, ಪೂನಂ ಮುಂತಾದವರು ಉಪಸ್ಥಿತರಿದ್ದರು.







