ವಾರ್ಡ್ ಸಮಿತಿ-ವಲಯ ಸಭೆ ನಡೆಸುವ ಬಗ್ಗೆ ಅಫಿದವಿತ್ ಕೊಟ್ಟರೆ ಬೆಂಬಲ: ಎಂಸಿಸಿ ಸಿವಿಕ್ ಗ್ರೂಪ್
ಮಂಗಳೂರು, ನ.4: ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ವಾರ್ಡ್ ಸಮಿತಿ ಹಾಗೂ ವಲಯ ಸಭೆ ನಡೆಸಲು ಬದ್ಧವಾಗುವ ಬಗ್ಗೆ ನ.9ರೊಳಗೆ ಅಫಿದವಿತ್ ನೀಡಿದರೆ ಮಾತ್ರ ಅವರನ್ನು ಬೆಂಬಲಿಸಲಿದೆ ಎಂದು ಎಂಸಿಸಿ ಸಿವಿಕ್ ಗ್ರೂಪ್ ತಿಳಿಸಿದೆ.
ನಗರದ ಪ್ರಸ್‌ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ನಾಗರಿಕ ಶಕ್ತಿ ಸಂಘಟನೆಯ ಅಧ್ಯಕ್ಷ ನರೇಂದ್ರ ಕುಮಾರ್ ವಾರ್ಡ್ ಕಮಿಟಿ ರಚಿಸುತ್ತೇನೆಂದು ಅಫಿದವಿತ್ ಸಲ್ಲಿಸುವ ಅಭ್ಯರ್ಥಿಯನ್ನು ಜನತೆ ಬೆಂಬಲಿಸಬೇಕು. ವಾರ್ಡ್ ಕಮಿಟಿ ರಚನೆಯಾದರೆ ಮುಂದೆ ವಾರ್ಡ್‌ಗಳಲ್ಲಿ ಅಭಿವೃದ್ಧಿ ಕೆಲಸಗಳು ಪರಸ್ಪರ ಚರ್ಚಿಸಿ ಕೈಗೆತ್ತಿಕೊಳ್ಳಲು ಅನುಕೂಲವಾಗುತ್ತದೆ ಎಂದರು.
2011ರ ಕೆಎಂಸಿ ಕಾಯ್ದೆಯನ್ನು ತಿದ್ದುಪಡಿಗೊಳಿಸಿ ಮೂರು ಲಕ್ಷಕ್ಕಿಂತ ಅಧಿಕ ಜನಸಂಖ್ಯೆ ಹೊಂದಿರುವ ಪ್ರದೇಶಗಳಲ್ಲಿ ವಲಯ ಸಭೆ ಮತ್ತು ವಾರ್ಡ್ ಸಮಿತಿ ರಚನೆ ಕಡ್ಡಾಯಗೊಳಿಸಿದ್ದರೂ ನಿಯಮ ಪಾಲನೆಯಾಗುತ್ತಿಲ್ಲ. ಇದರಿಂದ ಭ್ರಷ್ಟಾಚಾರ ಎಲ್ಲೆ ಮೀರುತ್ತಿದೆ. ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸುವ ಎಲ್ಲ ರಾಜಕೀಯ ಪಕ್ಷಗಳ ಮುಖ್ಯಸ್ಥರನ್ನು ವೇದಿಕೆಯು ಭೇಟಿಯಾಗಲಿದ್ದು, ಉದ್ದೇಶವನ್ನು ವಿವರಿಸಲಿದ್ದೇವೆ. ಅಫಿದವಿತ್ ಮೂಲಕ ಸಾಮಾಜಿಕ ಸಂಘಟನೆ ಮತ್ತು ನಿವಾಸಿ ಕಲ್ಯಾಣ ಸಂಘಗಳ ಮೂಲಕ ಯಾರು ಭರವಸೆ ನೀಡುತ್ತಾರೋ ಅವರಿಗೆ ಮಾತ್ರ ಮತ ಹಾಕುವ ಬಗ್ಗೆ ಒಂದು ಸಂದೇಶ ಹರಡಲು ಯತ್ನಿಸುವುದಾಗಿ ನರೇಂದ್ರ ಕುಮಾರ್ ಹೇಳಿದರು.
ನ್ಯಾಯಾಲಯ ನೀಡಿದ ಆದೇಶವನ್ನು ಪಾಲಿಸಲು ಚುನಾವಣೆ ಮುಗಿದ ಅನಂತರ 90 ದಿನಗಳ ಅವಕಾಶವಿದೆ. ಆ ಅವಧಿಯಲ್ಲಿ ಆದೇಶ ಜಾರಿಯಾಗದಿದ್ದರೆ ನ್ಯಾಯಾಲಯ ನಿಂದನೆ ದೂರು ಸಲ್ಲಿಸುತ್ತೇವೆ ಎಂದವರು ಹೇಳಿದರು.
33ನೆ ವಾರ್ಡ್‌ನ (ಕದ್ರಿ ದಕ್ಷಿಣ) ಪಕ್ಷೇತರ ಅಭ್ಯರ್ಥಿ ರಾಜೇಂದ್ರ ಕುಮಾರ್ ‘ವಾರ್ಡ್ ಸಮಿತಿ ರಚಿಸುವುದಾಗಿ ಸುದ್ದಿಗೋಷ್ಠಿಯಲ್ಲೇ ಅಫಿದವಿತ್ ಸಲ್ಲಿಸಿದರು.
ಸುದ್ದಿಗೋಷ್ಠಿಯಲ್ಲಿ ಸಿವಿಕ್ ಗ್ರೂಪ್ ಸಂಚಾಲಕ ನೈಜಿಲ್ ಅಲ್ಬುಕರ್ಕ್, ಪಾಲಿಕೆಯ ನಿವೃತ್ತ ಇಂಜಿನಿಯರ್ ಪದ್ಮನಾಭ ಉಳ್ಳಾಲ್, ರೂಪನ್ ಫೆರ್ನಾಂಡಿಸ್, ಅಜಯ್ ಡಿಸಿಲ್ವಾ ಉಪಸ್ಥಿತರಿದ್ದರು.







