ಬಡತನ, ನಿರುದ್ಯೋಗ ದೇಶಕ್ಕೆ ಶಾಪ: ನ್ಯಾ.ನಾಗಮೋಹನದಾಸ್
‘ಪ್ರೊ.ಬಿ.ಜಯಪ್ರಕಾಶಗೌಡ-70’ ಅಭಿನಂದನಾ ಸಮಾರಂಭ

ಬೆಂಗಳೂರು, ನ.4: ಭಾರತ ಶ್ರೀಮಂತ ದೇಶವಾಗಿದ್ದರೂ ಸಹ ಬಡತನ, ನಿರುದ್ಯೋಗ ಮತ್ತು ಹಸಿವು ಇವು ಸಮಾಜಕ್ಕೆ ಅಂಟಿದ ಶಾಪವಾಗಿದೆ. ಇವುಗಳ ನಿರ್ಮೂಲನೆ ಆಗಬೇಕು ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಅಭಿಪ್ರಾಯಪಟ್ಟರು.
ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಾಹಿತ್ಯ ಸಂಸ್ಕೃತಿ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ನಾಟಕಗಾರ ‘ಪ್ರೊ. ಬಿ ಜಯಪ್ರಕಾಶಗೌಡ- 70’ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಶಿಕ್ಷಣವಂತರು ಹೆಚ್ಚಾಗುತ್ತಿದ್ದಾರೆ. ಆದರೆ, ನೈತಿಕತೆ ಕಡಿಮೆ ಆಗುತ್ತಿದೆ. ಸಮಾಜದಲ್ಲಿ ನೈತಿಕತೆಯ ಚಟುವಟಿಕೆಗಳು ಆಗಬೇಕು. ಈ ರೀತಿಯ ಚಟುವಟಿಕೆಗಳಿಗೆ ಸಂಘ-ಸಂಸ್ಥೆಗಳು ಶ್ರಮಿಸಬೇಕು ಎಂದು ಹೇಳಿದರು.
ಪ್ರತಿಭೆಗಳಿಗೆ ಪುರಸ್ಕಾರ ಸಿಗದಿದ್ದರೆ ಅಭಿವೃದ್ಧಿ ಆಗುವುದಿಲ್ಲ. ಹಿರಿಯರಿಗೆ ಗೌರವ ಸಿಗದಿದ್ದರೆ ನಾಗರಿಕ ಸಮಾಜ ಎಂದು ಕರೆಸಿಕೊಳ್ಳುವುದಿಲ್ಲ. ಪ್ರತಿಭೆ ಎಂಬುದು ಶ್ರೀಮಂತರು ಪಡೆದ ಗುತ್ತಿಗೆಯಲ್ಲ. ನಿಜವಾದ ಪ್ರತಿಭೆಗಳಿಗೆ ಅವಕಾಶ ಸಿಗಬೇಕು. ಸಮಸ್ಯೆ ಮತ್ತು ಸವಾಲುಗಳನ್ನು ಸಮರ್ಥವಾಗಿ ಎದುರಿಸಿದಾಗ ಪ್ರತಿಭೆ ಬೆಳೆಯುತ್ತದೆ ಎಂದರು.
ನಿವೃತ್ತ ಐಪಿಎಸ್ ಅಧಿಕಾರಿ ಕೆ.ವಿ.ರವೀಂದ್ರನಾಥ್ ಠ್ಯಾಗೋರ್ ಮಾತನಾಡಿ, ಸರಕಾರ ನೀಡುವ ಪ್ರಶಸ್ತಿಯನ್ನು ಸರಕಾರವೇ ಕೊಟ್ಟಿದೆ ಎನ್ನುವದಕ್ಕಿಂತ ಕಿತ್ತು ತೆಗೆದುಕೊಳ್ಳಲಾಗಿದೆ ಎನ್ನಲಾಗುತ್ತದೆ. ನಿಜವಾಗಿಯೂ ಪ್ರಶಸ್ತಿಗೆ ಅರ್ಹರಾಗಿರುವ ಸಾಧಕರನ್ನು ಅನುಮಾನಿಸುವ ಕಾಲ ಬಂದಿದೆ ಎಂದರು. ಹೃದಯ ಶ್ರೀಮಂತಿಕೆ ಇರುವವರು ಹಳ್ಳಿಗಳಲ್ಲಿ ಹೆಚ್ಚು ಸಿಗುತ್ತಾರೆ. ಅಂತಹ ಹೃದಯ ಶ್ರೀಮಂತಿಕೆಯಳ್ಳ ಪ್ರೊ.ಬಿ.ಜಯಪ್ರಕಾಶಗೌಡರು ಸಹ ಹಳ್ಳಿಯಲ್ಲಿ ಬೆಳೆದ ಪ್ರತಿಭೆ. ಇಂತಹ ಪ್ರತಿಭೆಗೆ ಸನ್ಮಾನ ಸಿಗುವುದು ಮಾನವೀಯ ಹಕ್ಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ್, ಕುವೆಂಪು ಭಾಷಾ ಭಾರತಿ ಮಾಜಿ ಅಧ್ಯಕ್ಷ ಡಾ. ಕೆ. ಮರುಳಸಿದ್ದಪ್ಪ, ಸಾಹಿತ್ಯ ಸಂಸ್ಕೃತಿ ವೇದಿಕೆ ಗೌರವಾಧ್ಯಕ್ಷ ಪಿ.ಮಲ್ಲಿಕಾರ್ಜುನಪ್ಪ, ಅಧ್ಯಕ್ಷ ಎಂ.ತಿಮ್ಮಯ್ಯ, ಪ್ರಕಾರ ಪ್ರಧಾನ ಕಾರ್ಯದರ್ಶಿ ಸಿ.ಕೆ.ರಾಮೇಗೌಡ. ಮಂಜುಳಾ ಮತ್ತಿತರರಿದ್ದರು.







