ಉದ್ಯಾವರ: ಯೋಧನ ಪತ್ನಿಯಿಂದ ಮನೆ ಕೆಲಸದಾಕೆಗೆ ಹಲ್ಲೆ; ದೂರು
ಅಬ್ಬಕ ಪಡೆಯಿಂದ ಯುವತಿಯ ರಕ್ಷಣೆ
ಕಾಪು, ನ.4: ಯೋಧರೊಬ್ಬರ ಪತ್ನಿ ಮನೆಯ ಕೆಲಸದಾಕೆಯ ಮೇಲೆ ದೋಣ್ಣೆ ಯಿಂದ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ ಎನ್ನಲಾದ ಘಟನೆ ಉದ್ಯಾವರ ಶ್ರೀಗಣಪತಿ ದೇವಸ್ಥಾನದ ಬಳಿ ನ.3ರಂದು ರಾತ್ರಿ ವೇಳೆ ನಡೆದಿದೆ.
ಹಲ್ಲೆಗೊಳಗಾದ ಗೋಕರ್ಣ ನಿವಾಸಿ ಸರಸ್ವತಿ(20) ಎಂಬವರನ್ನು ಉಡುಪಿ ಮಹಿಳಾ ಪೊಲೀಸ್ ಠಾಣೆಯ ಉಪನಿರೀಕ್ಷಕಿ ಫೆಮಿನಾ ನೇತೃತ್ವದ ಅಬ್ಬಕ ಪಡೆ ತಂಡ ರಕ್ಷಿಸಿ ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಿದೆ. ಸೈನ್ಯದಲ್ಲಿರುವ ಕುಮಟಾದ ಯೋಧರೋರ್ವರ ಪತ್ನಿ ಸೌಮ್ಯ ಹಲ್ಲೆ ನಡೆಸಿದ ಆರೋಪಿ ಎಂದು ಗುರುತಿಸಲಾಗಿದೆ.
ಕುಮಟಾದಲ್ಲಿದ್ದ ಯೋಧರ ವರ್ಗಾವಣೆ ಹಿನ್ನೆಲೆಯಲ್ಲಿ ತನ್ನ ಸಂಬಂಧಿ ಕರು ಇರುವ ಉದ್ಯಾವರಕ್ಕೆ ತನ್ನ ಮನೆಯನ್ನು ಎರಡು ತಿಂಗಳ ಹಿಂದೆ ವರ್ಗಾ ಯಿಸಿದ್ದರು. ಬಾಡಿಗೆ ಮನೆಯಲ್ಲಿ ವಾಸವಾಗಿರುವ ಇವರು ತಮ್ಮ ಜೊತೆ ಕುಮಟಾದ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸರಸ್ವತಿಯನ್ನು ಕೂಡ ಕರೆದು ಕೊಂಡು ಬಂದಿದ್ದರೆನ್ನಲಾಗಿದೆ. ಇವರೊಂದಿಗೆ ಸೌಮ್ಯಳ ತಾಯಿ ಕೂಡ ವಾಸ ವಾಗಿದ್ದಾರೆ.
ಸೌಮ್ಯ ಮನೆಕೆಲಸದ ವಿಚಾರದಲ್ಲಿ ಸರಸ್ವತಿಗೆ ಪ್ರತಿದಿನ ದೈಹಿಕ ಹಿಂಸೆ ನೀಡುತ್ತಿದ್ದರೆಂದು ದೂರಲಾಗಿದೆ. ನಿನ್ನೆ ರಾತ್ರಿ ತನ್ನ ಆರು ತಿಂಗಳ ಮಗುವನ್ನು ಕೆಳಗೆ ಹಾಕಿದ್ದಾಳೆ ಮತ್ತು ವಾಕಿಂಗ್ ಹೋಗಿದ್ದ ವೇಳೆ ಮನೆಯ ಬೀಗದ ಕೀ ಬಿಸಾಡಿದ್ದಾಳೆ ಎಂಬ ಸಿಟ್ಟಿನಲ್ಲಿ ಸೌಮ್ಯ ದೋಣ್ಣೆಯಿಂದ ಸರಸ್ವತಿಯ ಮುಖ, ತಲೆ, ಕೈ ಕಾಲುಗಳಿಗೆ ಹೊಡೆದಿದ್ದಾರೆ ಎಂದು ದೂರಲಾಗಿದೆ.
ಇದರಿಂದ ಸರಸ್ವತಿ ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿಯಂತೆ ಇಂದು ಬೆಳಗ್ಗೆ ಮನೆಗೆ ತೆರಳಿದ ಅಬ್ಬಕ ಪಡೆ ಸರಸ್ವತಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
‘ಈ ಮಾಹಿತಿಯನ್ನು ಗೋಕರ್ಣದಲ್ಲಿರುವ ಸರಸ್ವತಿಯ ತಂದೆತಾಯಿಯ ವರಿಗೆ ತಿಳಿಸಲಾಗಿದ್ದು, ಅವರು ಉಡುಪಿಗೆ ಹೊರಟಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ ಯಾರನ್ನು ಬಂಧಿಸಿಲ್ಲ. ಹಲ್ಲೆ ನಡೆಸಿದ ಸೌಮ್ಯಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಜಾರಿ ಮಾಡಲಾಗುತ್ತದೆ’ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ತಿಳಿಸಿದ್ದಾರೆ.







