ಪೋಷಕರಿಂದಲೇ ಸಮಾಜಕ್ಕೆ ಘಾತುಕ ಮಕ್ಕಳ ಅರ್ಪಣೆ: ಹೈಕೋರ್ಟ್ ಕಿಡಿ

ಬೆಂಗಳೂರು, ಅ.4: ಪೋಷಕರು ಮಕ್ಕಳಲ್ಲಿ ದ್ವೇಷಿಸುವ ಗುಣಗಳನ್ನು ತುಂಬುವ ಮೂಲಕ ಈ ದೇಶವನ್ನು ಅಪಾಯದ ಸ್ಥಿತಿಗೆ ಕೊಂಡೊಯ್ಯುತ್ತಿದ್ದಾರೆ. ಹೀಗೆ ಮುಂದುವರೆಸಿಕೊಂಡು ಹೋದರೆ ಮಕ್ಕಳು ಸಮಾಜಘಾತುಕರಾಗಿ ಬದಲಾಗುತ್ತಾರೆ ಎಂದು ನ್ಯಾಯಮೂರ್ತಿ ಬಿ. ವೀರಪ್ಪ ಅವರು ಹೈಕೋರ್ಟ್ ಹಾಲ್‌ನಲ್ಲಿಯೇ ಏರು ಧ್ವನಿಯಲ್ಲಿ ಕಿಡಿಕಾರಿದ್ದಾರೆ.
ವಿಚ್ಛೇದನಕ್ಕೆ ಸಂಬಂಧಿಸಿದ ಅರ್ಜಿಯೊಂದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವೀರಪ್ಪ ಅವರು, ಮಕ್ಕಳನ್ನು ವಸ್ತುಗಳಂತೆ ಬಳಸಬಾರದು. ನಿಮ್ಮ ತೋರ್ಪಡಿಕೆಗಳಿಗೆ ಮಕ್ಕಳನ್ನು ಯಾಕೆ ಬಳಸಿಕೊಳ್ಳುತ್ತೀರಾ. ನಿಮ್ಮ ಪ್ರತಿಷ್ಠೆಗಳಿಗೆ ಧಕ್ಕೆಯಾಗಬಾರದು, ನಿಮ್ಮೆಲ್ಲಾ ದುರಹಂಕಾರಗಳಿಗೆ ಕೋರ್ಟ್‌ನಲ್ಲಿ ಜಯ ಸಿಗಬೇಕು ಅಲ್ಲವೇ ಎಂದು ಅಸಮಾಧಾನ ವ್ಯಕ್ತಪಡಿಸಿದರು. ತಮ್ಮ ಸ್ವಾರ್ಥಗಳಿಗೆ ಮಕ್ಕಳನ್ನು ಅಸ್ತ್ರವಾಗಿ ಬಳಸಿಕೊಳ್ಳುವವರು ಹೇಡಿಗಳು. ಇವರೆಲ್ಲಾ ತಾಲಿಬಾನ್‌ಗಿಂತಲೂ ವಿಕೃತವಾದ ಮಕ್ಕಳನ್ನು ಬೆಳೆಸುತ್ತಿದ್ದಾರೆ. ಪೋಷಕರ ವೈಷಮ್ಯ, ಕಲಹ, ಮನಸ್ತಾಪಗಳನ್ನೇ ನೋಡಿಕೊಂಡು ಬೆಳೆಯುವ ಮಕ್ಕಳು ಭವಿಷ್ಯದಲ್ಲಿ ಸಮಾಜಘಾತುಕರಾಗುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಮಕ್ಕಳು ದಾರಿ ತಪ್ಪಲು, ಅಪರಾಧ ಎಸಗಲು ಇಂತಹ ಪೋಷಕರೇ ಪ್ರಮುಖ ಕಾರಣ. ನಿಮ್ಮಂತಹ ಪೋಷಕರಿಂದಲೇ ಸಮಾಜಕ್ಕೆ ಘಾತುಕ ಮಕ್ಕಳ ಅರ್ಪಣೆಯಾಗುತ್ತಿದೆ. ನಿಮ್ಮೊಳಗಿನ ಸೇಡು ತೀರಿಸಿಕೊಳ್ಳಲು ನೀವು ನಿಮ್ಮ ಮಕ್ಕಳನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದೀರಿ. ದಯಮಾಡಿ, ಸಮಾಜಕ್ಕೆ ಹಾನಿ ಮಾಡಬೇಡಿ ಎಂದು ಅರ್ಜಿದಾರರ ವಿರುದ್ಧ ಕಿಡಿಕಾರಿದರು.
ವಿದ್ಯಾವಂತರೇ ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ನೀಚ ಕೆಲಸಗಳಲ್ಲಿ ತೊಡಗಿದ್ದಾರೆ. ಹಣಕ್ಕಾಗಿ ಕೆಲಸ ಮಾಡುವುದಲ್ಲ. ಸಮಾಜಕ್ಕೂ ಸಹಾಯ ಆಗುವ ಕೆಲಸ ಮಾಡಬೇಕು. ವಕೀಲರ ಸಂಘ ಹಾಗೂ ಸ್ವಯಂ ಸೇವಾ ಸಂಸ್ಥೆಗಳು ಇಂತಹ ಸಂಗತಿಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕೆಂದು ಸಲಹೆ ನೀಡಿದರು.
ಏನಿದು ಪ್ರಕರಣ: ಕೌಟುಂಬಿಕ ನ್ಯಾಯಾಲಯಕ್ಕೆ ವಿಚ್ಛೇದನ ಅರ್ಜಿ ಸಲ್ಲಿಸಿದ್ದ ದಂಪತಿ. ಪತಿ ಅಮೆರಿಕಾದಲ್ಲಿ ವೈದ್ಯ ವೃತ್ತಿಯಲ್ಲಿದ್ದಾರೆ, ಪತ್ನಿ ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ವೃತ್ತಿ ನಿರ್ವಹಿಸುತ್ತಿದ್ದಾರೆ. ಅಮೆರಿಕಾದಲ್ಲಿರುವ ಪತಿ ಬೆಂಗಳೂರಿಗೆ ಬರೋದು ತಿಂಗಳಿಗೊಮ್ಮೆ ಮಕ್ಕಳು ಪೋಷಕರೊಡನೆ 50:50ರಂತೆ ಸಮಯ ಕಳೆಯಲು ಅವಕಾಶವಿದೆ. ಆದರೆ, ಪತಿ ಬೆಂಗಳೂರಿಗೆ ಬಂದಾಗ ಮಗುವನ್ನು ಕೇವಲ 2 ಗಂಟೆಗಳ ಕಾಲ ಮಾತ್ರ ಪತಿಯೊಂದಿಗೆ ಇರಲು ಅವಕಾಶ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪತ್ನಿಗೆ ಸೂಕ್ತ ನಿರ್ದೇಶನ ನೀಡುವಂತೆ ಪತಿ ಹೈಕೋರ್ಟ್ ಮೆಟ್ಟಿಲೇರಿದ್ದರು.