ಅಯೋಧ್ಯೆಯಲ್ಲಿ ಡಿಸೆಂಬರ್ 28ರವರೆಗೆ ಸೆಕ್ಷನ್ 144 ವಿಸ್ತರಣೆ
ಅಯೋಧ್ಯೆ ವಿವಾದದ ಕುರಿತ ತೀರ್ಪಿನ ಹಿನ್ನಲೆ
ಲಕ್ನೊ, ನ.4: ಈ ತಿಂಗಳಾಂತ್ಯದಲ್ಲಿ ಅಯೋಧ್ಯೆ ವಿವಾದದ ಕುರಿತ ತೀರ್ಪನ್ನು ಸುಪ್ರೀಂಕೋರ್ಟ್ ಪ್ರಕಟಿಸುವ ಸಾಧ್ಯತೆ ಇರುವುದರಿಂದ ಅಯೋಧ್ಯೆಯಲ್ಲಿ ಡಿಸೆಂಬರ್ 28ರವರೆಗೆ ಸೆಕ್ಷನ್ 144 ವಿಸ್ತರಿಸಲಾಗಿದೆ ಎಂದು ಜಿಲ್ಲಾಧಿಕಾರಿಯ ಹೇಳಿಕೆ ತಿಳಿಸಿದೆ.
ಯಾವುದೇ ಧರ್ಮ, ಸಮುದಾಯ, ಪಂಥ ಅಥವಾ ಗಣ್ಯ ವ್ಯಕ್ತಿಗಳ ವಿರುದ್ಧ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಮಾನಹಾನಿಕರ ಹೇಳಿಕೆ ನೀಡುವುದನ್ನು ನಿಷೇಧಿಸಲಾಗಿದೆ. ಅಲ್ಲದೆ ರಾಮಜನ್ಮಭೂಮಿ- ಬಾಬರಿ ಮಸೀದಿ ವಿಷಯಕ್ಕೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮ ಆಯೋಜಿಸಬಾರದು ಎಂದು ಅಯೋಧ್ಯೆಯ ಜಿಲ್ಲಾಧಿಕಾರಿ ಅನುಜ್ ಝಾ ಅಕ್ಟೋಬರ್ 31ರಂದು ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.
ಕೋಮು ಸೌಹಾರ್ದವನ್ನು ಕೆಡಿಸಲು ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗಳಿಗೆ ಅವಕಾಶ ನೀಡಲಾಗುವುದಿಲ್ಲ. ಸಾರ್ವಜನಿಕ ಭದ್ರತೆಗೆ ನಿಯೋಜಿಸಲ್ಪಟ್ಟಿರುವ ಸಿಬ್ಬಂದಿ ವಿನಹ ಬೇರೆ ಯಾರಿಗೂ ಸಾರ್ವಜನಿಕ ಸ್ಥಳಗಳಲ್ಲಿ ಆಯುಧ ಅಥವಾ ಸ್ಫೋಟಕ ವಸ್ತುಗಳನ್ನು ಕೊಂಡೊಯ್ಯಲು ಅವಕಾಶವಿಲ್ಲ. ಲೈಸೆನ್ಸ್ ಪಡೆದ ಆಯುಧವಿದ್ದವರೂ ಯಾವುದೇ ಕಾರ್ಯಕ್ರಮಕ್ಕೆ ಇದನ್ನು ಕೊಂಡೊಯ್ಯುವಂತಿಲ್ಲ. ಅಯೋಧ್ಯೆಯಲ್ಲಿ ಜನರು ಗುಂಪುಗೂಡುವುದಕ್ಕೆ ಅವಕಾಶವಿಲ್ಲ ಎಂದು ಆದೇಶ ತಿಳಿಸಿದೆ.
ಅಲ್ಲದೆ ಜಿಲ್ಲಾಡಳಿತದ ಅನುಮತಿಯಿಲ್ಲದೆ ನಗರದಲ್ಲಿ ಯಾವುದೇ ಪೋಸ್ಟರ್‌ಗಳು, ಭಿತ್ತಿಪತ್ರಗಳು ಅಥವಾ ಬ್ಯಾನರ್‌ಗಳನ್ನು ಅಳವಡಿಸಬಾರದು. ಅಲ್ಲದೆ ಅನುಮತಿ ಪಡೆಯದೆ ಕಾರ್ಯಕ್ರಮ, ರ್ಯಾಲಿ ನಡೆಸುವಂತಿಲ್ಲ. ಪ್ರತಿಕೃತಿ ಸುಡುವುದು ಅಥವಾ ಉದ್ರಿಕ್ತಕಾರಿ ಭಾಷಣ ನಡೆಸಬಾರದು. ಅಲ್ಲದೆ ಪೂರ್ವಾನುಮತಿ ಪಡೆಯದೆ ಅಯೋಧ್ಯೆ ಕುರಿತು ಮಾಧ್ಯಮದಲ್ಲಿ ಯಾವುದೇ ಸಂವಾದ ಕಾರ್ಯಕ್ರಮ ನಡೆಸಬಾರದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಸಾರ್ವಜನಿಕ ಪ್ರದೇಶದಲ್ಲಿ ಪ್ರಾಣಿಗಳ ಮಾಂಸ ಎಸೆಯುವುದು, ಐದಕ್ಕಿಂತ ಹೆಚ್ಚು ಜನ ಒಂದೆಡೆ ಗುಂಪು ಸೇರುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಲಾಗಿದೆ.







