ಬದುಕಿನ ಸ್ಪರ್ಧೆಯಲ್ಲೂ ಗೆಲ್ಲುವ ಇಚ್ಛಾಶಕ್ತಿ ಬೆಳೆಸಿಕೊಳ್ಳಲಿ: ಶಾಸಕ ರಾಜೇಶ್ ನಾಯ್ಕ್
ದ.ಕ.ಜಿಲ್ಲಾ ಮಟ್ಟದ ಕಲಾಶ್ರೀ ಪ್ರಶಸ್ತಿ ಆಯ್ಕೆ ಶಿಬಿರ

ಬಂಟ್ವಾಳ, ನ. 4: ಸ್ಪರ್ಧೆಯನ್ನು ಕೇವಲ ವೇದಿಕೆಗೆ ಸೀಮಿತವಾಗಿರಿಸದೇ ಬದುಕಿನ ಸ್ಪರ್ಧೆಯಲ್ಲೂ ಗೆಲ್ಲುವ ಇಚ್ಛಾಶಕ್ತಿಯನ್ನು ಮಕ್ಕಳು ಬೆಳೆಸಿಕೊಳ್ಳಬೇಕು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು.
ರಾಜ್ಯ ಬಾಲಭವನ ಸೊಸೈಟಿ-ಬೆಂಗಳೂರು, ದ.ಕ.ಜಿಲ್ಲಾ ಬಾಲಭವನ ಸಮಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಆಶ್ರಯದಲ್ಲಿ ಬಿ.ಸಿ.ರೋಡಿನ ಸ್ತ್ರೀ ಶಕ್ತಿ ಭವನದಲ್ಲಿ ಸೋಮವಾರ ನಡೆದ ದ.ಕ.ಜಿಲ್ಲಾ ಮಟ್ಟದ ಕಲಾಶ್ರೀ ಪ್ರಶಸ್ತಿ ಆಯ್ಕೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿವಿಧ ಕ್ಷೇತ್ರಗಳಲ್ಲಿ ಆಸಕ್ತಿ ಇರುವ ಪ್ರತಿಭೆಗಳಿಗೆ ಉತ್ತಮ ವೇದಿಕೆ ಕಲ್ಪಿಸುವುದರ ಜೊತೆಗೆ ಯಾವುದೇ ಭಯವಿಲ್ಲದೆ ವೀಕ್ಷಕರನ್ನು ಎದುರಿಸುವ ತರಬೇತಿಯನ್ನು ನೀಡಬೇಕಾಗಿದೆ ಎಂದು ಶಾಸಕರು ಹೇಳಿದರು. ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಸಮಾಜಮುಖಿಯಾಗಿ ಬೆಳೆಸಬೇಕಾದ ಅನಿವಾರ್ಯತೆ ಇದ್ದು, ಕಲಾಶ್ರೀ ಯಂತಹ ಚಟುವಟಿಕೆ ಇಂತಹಾ ಗುಣಾತ್ಮಕ ಅಂಶಗಳನ್ನು ಬೆಳೆಸುತ್ತದೆ ಎಂದರು.
ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ತಾಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ವೇದಿಕೆಯಲ್ಲಿದ್ದು, ಕಾರ್ಯಕ್ರಮಕ್ಕೆ ಶುಭಹಾರೈಸಿದರು. ತಾಲೂಕು ಮಟ್ಟದಿಂದ ಆಯ್ಕೆಯಾದ ಒಟ್ಟು 48 ಸ್ಪರ್ಧಾಳುಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಸುಂದರ ಪೂಜಾರಿ ಸ್ವಾಗತಿಸಿದರು. ಬಂಟ್ವಾಳ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಲತಾ ವಂದಿಸಿದರು. ವಿಟ್ಲ ಸಿಡಿಪಿಒ ಸುಧಾಜೋಶಿ ಕಾರ್ಯಕ್ರಮ ನಿರೂಪಿಸಿದರು.







