ಬೆಳೆ ತ್ಯಾಜ್ಯ ದಹಿಸುವ ರೈತರ ಬಗ್ಗೆ ಅನುಕಂಪ ಬೇಡ: ಸುಪ್ರೀಂ ಕೋರ್ಟ್

ಹೊಸದಿಲ್ಲಿ, ನ. 4: ಹೊಸದಿಲ್ಲಿಯ ವಾಯು ಮಾಲಿನ್ಯವನ್ನು ‘ಅಮಾನವೀಯ’ ಎಂದು ಸೋಮವಾರ ವ್ಯಾಖ್ಯಾನಿಸಿರುವ ಸುಪ್ರೀಂ ಕೋರ್ಟ್, ಜನರು ಮನೆಯ ಒಳಗೆ ಕೂಡ ಸುರಕ್ಷಿತರಲ್ಲ ಎಂದಿದೆ. ವಾಯು ಮಾಲಿನ್ಯಕ್ಕೆ ಶೇ. 46ರಷ್ಟು ಕಾರಣ ಎಂದು ಹೇಳಲಾಗುತ್ತಿರುವ ಉತ್ತರಪ್ರದೇಶ ಪಂಜಾಬ್ ಹಾಗೂ ಹರ್ಯಾಣದ ರೈತರ ಬೆಳೆ ತ್ಯಾಜ್ಯ ದಹನವನ್ನು ಕೂಡಲೇ ಸಂಪೂರ್ಣವಾಗಿ ನಿಲ್ಲಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಎನ್‌ಸಿಆರ್‌ನಲ್ಲಿ ಜನರು ತಮ್ಮ ಜೀವನದ ಅಮೂಲ್ಯ ವರ್ಷಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಅವರನ್ನು ಸಾಯಲು ಬಿಡಬಾರದು ಎಂದು ಹೇಳಿದ ಸುಪ್ರೀಂ ಕೋರ್ಟ್, ಪ್ರಸಕ್ತ ವಾಯು ಮಾಲಿನ್ಯ ಸುಸಂಸ್ಕೃತ ದೇಶಕ್ಕೆ ಶೋಭೆ ತರುವಂತದ್ದು ಅಲ್ಲ. ಇತರರ ಜೀವವನ್ನು ಅಪಾಯದಲ್ಲಿ ಸಿಲುಕಿಸುವ ಬೆಳೆ ತ್ಯಾಜ್ಯ ದಹಿಸುವ ರೈತರ ಬಗ್ಗೆ ಅನುಕಂಪ ತೋರಿಸುವ ಅಗತ್ಯ ಇಲ್ಲ ಎಂದಿದೆ.
ಎನ್‌ಸಿಆರ್‌ನಲ್ಲಿ ವಾಯು ಗುಣಮಟ್ಟ ‘ಗಂಭೀರ’ ಸ್ಥಿತಿಯಲ್ಲಿದೆ ಎಂದ ನ್ಯಾಯಾಲಯ, ದಿಲ್ಲಿ ಹಾಗೂ ಎನ್‌ಸಿಆರ್ ವಲಯದಲ್ಲಿ ಮುಂದಿನ ಆದೇಶ ನೀಡುವ ವರೆಗೆ ಎಲ್ಲಾ ನಿರ್ಮಾಣ ಕಾಮಗಾರಿ, ಕಟ್ಟಡ ಧ್ವಂಸ ಹಾಗೂ ತ್ಯಾಜ್ಯ ದಹಿಸುವುದನ್ನು ನಿಲ್ಲಿಸುವಂತೆ ನಿರ್ದೇಶನಗಳನ್ನು ನೀಡಿತು.





