ಆನ್ಲೈನ್ನಲ್ಲೇ ಇನ್ನು ಪಾನ್ಕಾರ್ಡ್: ವಿವರಗಳಿಗೆ ಕ್ಲಿಕ್ ಮಾಡಿ
ಹೊಸದಿಲ್ಲಿ, ನ.5: ಆಧಾರ್ ಕಾರ್ಡ್ನಲ್ಲಿ ಲಭ್ಯವಿರುವ ಮಾಹಿತಿಗಳನ್ನು ಬಳಸಿಕೊಂಡು ತಕ್ಷಣವೇ ಆನ್ಲೈನ್ ಮೂಲಕ ಪಾನ್ಕಾರ್ಡ್ ನೀಡಲು ಆದಾಯ ತೆರಿಗೆ ಇಲಾಖೆ ಸಜ್ಜಾಗಿದೆ. ಇದರಿಂದಾಗಿ ಪಾನ್ಕಾರ್ಡ್ ಆಕಾಂಕ್ಷಿಗಳು ತಮ್ಮ ಕಾರ್ಡ್ ಪಡೆಯಲು ಕಾಯುವ ಅಗತ್ಯ ಇರುವುದಿಲ್ಲ. ಮುಂದಿನ ಕೆಲ ವಾರಗಳಲ್ಲಿ ಈ ಸೇವೆಗೆ ಚಾಲನೆ ನಿಡಲಾಗುವುದು. ಇದು ಹಾಲಿ ಪಾನ್ಕಾರ್ಡ್ ಹೊಂದಿರುವವರಿಗೆ ಕೆಲವೇ ನಿಮಿಷಗಳಲ್ಲಿ ಡೂಪ್ಲಿಕೇಟ್ ಕಾರ್ಡ್ ಪಡೆಯಲು ಕೂಡಾ ನೆರವಾಗಲಿದೆ ಎಂದು ಉನ್ನತ ಮೂಲಗಳು ಹೇಳಿವೆ.
ಎಲೆಕ್ಟ್ರಾನಿಕ್ ಪಾನ್ಕಾರ್ಡ್ಗಳು (ಇ-ಪಾನ್) ಉಚಿತವಾಗಿ ತಕ್ಷಣವೇ ಲಭ್ಯವಾಗಲಿದೆ. ಇ-ಪಾನ್ ಪಡೆಯಲು ಅಪೇಕ್ಷಿತರು ತಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ, ಒಂದು ಬಾರಿಯ ಪಾಸ್ವರ್ಡ್ (ಓಟಿಪಿ) ಬಳಸಿಕೊಂಡು ವಿವರಗಳನ್ನು ದೃಢೀಕರಿಸಿಕೊಳ್ಳಬಹುದಾಗಿದೆ. ವಿಳಾಸ, ತಂದೆಯ ಹೆಸರು, ಜನ್ಮ ದಿನಾಂಕ ಮತ್ತಿತರ ವಿವರಗಳನ್ನು ಆನ್ಲೈನ್ ಮೂಲಕ ಪಡೆಯಲು ಅವಕಾಶ ಇರುವುದರಿಂದ, ಕೆಲ ಮೂಲ ಮಾಹಿತಿಗಳನ್ನು ಹೊರತುಪಡಿಸಿ ಯಾವುದೇ ದಾಖಲೆಗಳನ್ನು ಅಪ್ಲೋಡ್ ಮಾಡುವ ಅಗತ್ಯತೆ ಇರುವುದಿಲ್ಲ ಎಂದು ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇ-ಪಾನ್ ಸೃಷ್ಟಿಯಾದ ಬಳಿಕ, ಡಿಜಿಟಲ್ ಸಹಿ ಇರುವ ಇ-ಪಾನ್ಕಾರ್ಡ್ಗಳನ್ನು ಅರ್ಜಿದಾರರಿಗೆ ಒದಗಿಸಲಾಗುವುದು. ಜತೆಗೆ ಇದರಲ್ಲಿರುವ ಕ್ಯೂಆರ್ ಕೋಡ್, ಭೌಗೋಳಿಕ ಮಾಹಿತಿ ಮತ್ತು ಅರ್ಜಿದಾರರ ಭಾವಚಿತ್ರವನ್ನು ಸೆರೆಹಿಡಿಯುತ್ತದೆ. ಕ್ಯೂಆರ್ ಕೋಡ್ ಮಾಹಿತಿಯನ್ನು ಎನ್ಕ್ರಿಪ್ಟ್ ಮಾಡುವ ಮೂಲಕ ನಕಲಿ ಅಥವಾ ಡಿಜಿಟಲ್ ಫೋಟೊಶಾಪ್ ಮಾಡುವುದನ್ನು ತಡೆಯಲಾಗುತ್ತದೆ ಎಂದು ವಿವರಿಸಿದ್ದರೆ.
ಈಗಾಗಲೇ ಪ್ರಾಯೋಗಿಕವಾಗಿ ಎಂಟು ದಿನಗಳಲ್ಲಿ 62 ಸಾವಿರಕ್ಕೂ ಅಧಿಕ ಇ-ಪಾನ್ಕಾರ್ಡ್ಗಳನ್ನು ವಿತರಿಸಲಾಗಿದೆ. ಇದನ್ನು ದೇಶವ್ಯಾಪಿ ವಿಸ್ತರಿಸಲಾಗುವುದು. ಇದು ಮುಂದಿನ ಕೆಲ ವಾರಗಳಲ್ಲಿ ಇಡೀ ದೇಶಕ್ಕೆ ವಿಸ್ತರಣೆಯಾಗಲಿದೆ ಎಂದು ಹೇಳಿದ್ದಾರೆ.