ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಕ್ಷಮೆ ಕೇಳದಿದ್ದರೆ ಸುಮ್ಮನೆ ಬಿಡುವುದಿಲ್ಲ: ಜನಾರ್ದನ ಪೂಜಾರಿ

ಮಂಗಳೂರು, ನ.5: ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿ ತನ್ನ ಸಲಹೆ ಸೂಚನೆ ಪಡೆದಿದ್ದೇವೆ ಎಂಬ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಹೇಳಿಕೆ ಸತ್ಯಕ್ಕೆ ದೂರವಾದುದು ಎಂದು ಹಿರಿಯ ಕಾಂಗ್ರೆಸ್ ಮುಖಂಡ ಸಚಿವ ಜನಾರ್ದನ ಪೂಜಾರಿ ಹೇಳಿದ್ದಾರೆ.
ನಗರದ ಪ್ರೆಸ್ ಕ್ಲಬ್‌ನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಹೇಳಿಕೆಗಾಗಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಇಂದು ಸಂಜೆಯೊಳಗೆ ಕ್ಷಮೆ ಯಾಚಿಸಬೇಕು. ಇಲ್ಲವಾದರೆ ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಪೂಜಾರಿ ಇಲ್ಲದಿದ್ದರೂ ಗೆಲ್ಲಬಹುದೆಂಬ ಭಾವನೆ ಕಾಂಗ್ರೆಸ್‌ನ ಕೆಲವು ನಾಯಕರಲ್ಲಿದೆ. ಅದನ್ನು ತೋರಿಸಿಕೊಡಲಿ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ನಿಮ್ಮ ಜೊತೆಯಲ್ಲಿದ್ದವರು ಯಾಕೆ ಹೀಗೆ ಮಾಡುತ್ತಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜನಾರ್ದನ ಪೂಜಾರಿ, ಅಧಿಕಾರದ ಲಾಲಸೆ ಎಂದು ಹೇಳಿದರು.
ಪೂಜಾರಿ ಇಲ್ಲದಿದ್ದರೂ ಗೆಲ್ಲಬಹುದೆಂಬ ಭಾವನೆ ಕಾಂಗ್ರೆಸ್ ನ ಕೆಲವು ನಾಯಕರಲ್ಲಿದೆ. ಅದನ್ನು ತೋರಿಸಿಕೊಡಲಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಕ್ಷದ ಕಾರ್ಯಕರ್ತರಾಗಲಿ, ನಾಯಕರಾಗಲಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ನನಗೆ ಗಮನಕ್ಕೆ ತಂದಿಲ್ಲ. ಇದನ್ನು ನಾನು ಬೇಸರಿಂದ ಹೇಳುತ್ತಿದ್ದೇನೆ. ಕಾಂಗ್ರೆಸ್ ಅಧ್ಯಕ್ಷರು ನಾನು ಸತ್ತಿರುವುದಾಗಿ ಭಾವಿಸಿದ್ದಾರೆ. ಈ ರೀತಿ ಅಗಬಾರದಿತ್ತು. ಚುನಾವಣೆ ಘೋಷಣೆ ಆದಂತೆಯೇ ನಾನು ಪಕ್ಷದ ಚುನಾವಣಾ ಉಸ್ತುವಾರಿ ವೇಣುಗೋಪಾಲ್‌ರಿಗೆ ಕರೆ ಮಾಡಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಹಿರಿತನ, ಜಾತಿ ಹಾಗೂ ವರ್ಗಗಳಿಗೆ ಅವಕಾಶ ನೀಡಬೇಕು ಎಂದು ತಿಳಿಸಿದ್ದೆ ಎಂದರು.
ನನ್ನಲ್ಲಿ ಸಮಾಲೋಚನೆ ಮಾಡಬೇಕೆಂದು ಯಾರಲ್ಲೂ ಹೇಳಿಲ್ಲ. ಈ ರೀತಿ ಸುಳ್ಳು ಹೇಳಬಾರದು. ಸತ್ಯಕ್ಕೆ ದೂರವಾದ ಮಾತನ್ನು ಕಾಂಗ್ರೆಸ್‌ನವರು ಹೇಳಬಾರದು. ಕಾಂಗ್ರೆಸ್‌ನವರು ಪೂಜಾರಿ ಬಳಿ ಸಮಾಲೋಚನೆ ಮಾಡುವುದಿಲ್ಲ. ಅದಕ್ಕಾಗಿ ಪೂಜಾರಿ ಕಣ್ಣೀರು ಸುರಿಸಿ ಕುಳಿತುಕೊಳ್ಳುವುದಿಲ್ಲ. ಏನು ಮಾಡಬೇಕೆಂದು ನನಗೆ ಗೊತ್ತಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವಿಜಯ ಕುಮಾರ್ ಶೆಟ್ಟಿ, ಕಳ್ಳಿಗೆ ತಾರನಾಥ ಶೆಟ್ಟಿ, ಕರುಣಾಕರ, ಶಶಿರಾಜ್ ಅಂಬಟ್ ಉಪಸ್ಥಿತರಿದ್ದರು.







