ಕಲಾಂ ಪುರಸ್ಕಾರದ ಹೆಸರು ಬದಲಿಸಿದ ಜಗನ್ ಸರಕಾರ: ಭಾರೀ ವಿರೋಧದ ನಂತರ ಆದೇಶ ವಾಪಸ್

ದಿಲ್ಲಿ, ನ.5: ಹಲವಾರು ಯೋಜನೆಗಳ ಹೆಸರುಗಳನ್ನು ಈಗಾಗಲೇ ಬದಲಾಯಿಸಿರುವ ಆಂಧ್ರ ಪ್ರದೇಶದ ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರಕಾರ ಸೋಮವಾರ 'ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಪ್ರತಿಭಾ ಪುರಸ್ಕಾರ್' ಪ್ರಶಸ್ತಿಯ ಹೆಸರನ್ನು 'ವೈಎಸ್‌ಆರ್ ವಿದ್ಯಾ ಪುರಸ್ಕಾರ್' ಎಂದು ಮರು ನಾಮಕರಣಗೊಳಿಸಿ ಹೊರಡಿಸಿದ ಆದೇಶವನ್ನು ಮಂಗಳವಾರ ವಾಪಸ್ ಪಡೆದಿದೆ. ವಿಪಕ್ಷಗಳ ಟೀಕೆಗೆ ಮಣಿದು ಸರಕಾರ ತನ್ನ ಆದೇಶ ವಾಪಸ್ ಪಡೆದಿದೆಯೆಂದೇ ತಿಳಿಯಲಾಗಿದೆ.
ಕಲಾಂ ಪ್ರತಿಭಾ ಪುರಸ್ಕಾರ್ ಹೆಸರನ್ನು ಜಗನ್ ತಂದೆ, 2009ರಲ್ಲಿ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಮಾಜಿ ಮುಖ್ಯಮಂತ್ರಿ ವೈ ಎಸ್ ರಾಜಶೇಖರ ರೆಡ್ಡಿ ಅವರ ಸ್ಮರಣಾರ್ಥ ವೈಎಸ್‌ಆರ್ ವಿದ್ಯಾ ಪುರಸ್ಕಾರ್ ಎಂದು ಬದಲಾಯಿಸಿದ್ದನ್ನು ತೀವ್ರವಾಗಿ ಖಂಡಿಸಿ ತೆಲುಗು ದೇಶಂ ಪಕ್ಷದ ಮುಖ್ಯಸ್ಥ, ಮಾಜಿ ಸಿಎಂ ಚಂದ್ರಬಾಬು ನಾಯ್ಡು ಟ್ವೀಟ್ ಮಾಡಿದ್ದರು. "ಬಹಳಷ್ಟು ಗೌರವಾನ್ವಿತ ವ್ಯಕ್ತಿಯೊಬ್ಬರಿಗೆ ಅಗೌರವ ತೋರಿಸಿ ಸ್ವಯಂ ವೈಭವೀಕರಣಕ್ಕೆ ಸರಕಾರ ಮುಂದಾಗಿದೆ'' ಎಂದು ಆರೋಪಿಸಿದ್ದರು.
"ನಿಜವಾದ ಹೀರೋಗಳನ್ನು ಅವಮಾನಿಸಿ ವಂಶಾಡಳಿತ ರಾಜಕಾರಣವನ್ನು ಸರಕಾರ ಉತ್ತೇಜಿಸಿದೆ'' ಎಂದು ಬಣ್ಣಿಸುವ ಮೂಲಕ ಬಿಜೆಪಿ ನಾಯಕ ಲಂಕ ದಿನಕರ್ ಸರಕಾರದ ನಿರ್ಧಾರವನ್ನು ಖಂಡಿಸಿದ್ದರು.
ಅಧಿಕಾರಕ್ಕೆ ಬಂದಂದಿನಿಂದ ಜಗನ್ ಮೋಹನ್ ರೆಡ್ಡಿ ಸರಕಾರ ಹಲವಾರು ಯೋಜನೆಗಳ ಹೆಸರುಗಳನ್ನು ಬದಲಾಯಿಸಿದೆ. ಎನ್‌ಟಿಆರ್ ಭರೋಸ ಯೋಜನೆಯನ್ನು ವೈಎಸ್‌ಆರ್ ಪೆನ್ಶನ್ ಕಾನುಕ ಎಂದು ಬದಲಾಯಿಸಲಾಗಿದ್ದರೆ ಅಣ್ಣಾ ಕ್ಯಾಂಟೀನುಗಳು ರಾಜಣ್ಣ ಕ್ಯಾಂಟೀನುಗಳಾಗಿವೆ. ಅಂತೆಯೇ ಮಧ್ಯಾಹ್ನದ ಬಿಸಿಯೂಟ ಯೋಜನೆ ಈಗ ವೈಎಸ್‌ಆರ್ ಅಕ್ಷಯಪಾತ್ರ ಆಗಿದೆ.







