ಮಹಿಳಾ ತಹಶೀಲ್ದಾರ್ ಜೀವಂತ ದಹನ ಪ್ರಕರಣ: ಪ್ರಾಣ ಒತ್ತೆ ಇಟ್ಟು ರಕ್ಷಣೆಗೆ ಯತ್ನಿಸಿದ ಚಾಲಕ ಮೃತ್ಯು

ತಹಶೀಲ್ದಾರ್ ವಿಜಯಾ
ಹೈದರಾಬಾದ್, ನ.5: ತೆಲಂಗಾಣದ ಅಬ್ದುಲ್ಲಾಪುರ್ಮ್ಪೇಟ್ ಎಂಬಲ್ಲಿ ತಹಶೀಲ್ದಾರ್ ವಿಜಯಾ ರೆಡ್ಡಿಯನ್ನು ಕಚೇರಿಯಲ್ಲಿಯೇ ವ್ಯಕ್ತಿಯೊಬ್ಬ ಜೀವಂತ ದಹಿಸಿದ ಘಟನೆಯ ಮರುದಿನವೇ ಅವರ ಚಾಲಕ ಕೂಡ ಸುಟ್ಟ ಗಾಯಗಳಿಂದಾಗಿ ಮೃತಪಟ್ಟಿದ್ದಾನೆ.
ಚಾಲಕ ಗುರುನಾಥನ್ ವಿಜಯಾ ಅವರನ್ನು ರಕ್ಷಿಸಲು ಯತ್ನಿಸಿದಾಗ ಅವರಿಗೂ ಶೇ.80ರಷ್ಟು ಸುಟ್ಟ ಗಾಯಗಳುಂಟಾಗಿತ್ತು.
ಅಪೋಲೋ ಡಿಆರ್ಡಿಒ ಆಸ್ಪತ್ರೆಯಲ್ಲಿ ಗುರುನಾಥನ್ ರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಗುರುನಾಥನ್ ತನ್ನ ಗರ್ಭಿಣಿ ಪತ್ನಿ ಹಾಗೂ ಎರಡು ವರ್ಷದ ಮಗನನ್ನು ಅಗಲಿದ್ದಾರೆ.
ಭೂವಿವಾದವೊಂದಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್ ವಿಜಯಾರನ್ನು ಸೋಮವಾರ ಅಪರಾಹ್ನ ಸುರೇಶ್ ಎಂಬ ವ್ಯಕ್ತಿ ಬೆಂಕಿ ಹಚ್ಚಿ ಸಾಯಿಸಿದ್ದ. ವಿಜಯಾ ರೆಡ್ಡಿ ತಮ್ಮ ಪತಿ, 10 ವರ್ಷದ ಪುತ್ರಿ ಹಾಗೂ 5 ವರ್ಷದ ಪುತ್ರನನ್ನು ಅಗಲಿದ್ದಾರೆ.
ಅಬ್ದುಲ್ಲಾಪುರ್ಮ್ಪೇಟ್ ಎಂಬಲ್ಲಿ ಮೂರು ವರ್ಷಗಳ ಹಿಂದೆ ತಹಶೀಲ್ದಾರ್ ಕಚೇರಿ ಆರಂಭಗೊಂಡ ನಂತರ ಅಲ್ಲಿನ ಮೊದಲ ತಹಸೀಲ್ದಾರ್ ಆಗಿದ್ದರು. ಈ ಹಿಂದೆ ಸರಕಾರಿ ಶಾಲೆಯ ಶಿಕ್ಷಕಿಯಾಗಿದ್ದ ಆಕೆ ವಿದ್ಯಾಭ್ಯಾಸ ಮುಂದುವರಿಸಿ ಮಂಡಲ್ ರೆವೆನ್ಯೂ ಅಧಿಕಾರಿಯಾಗಲು ಅರ್ಹತೆ ಪಡೆದಿದ್ದರು. ಕಳೆದ ವರ್ಷ ಅತ್ಯುತ್ತಮ ಮಂಡಲ್ ಮಟ್ಟದ ಕಂದಾಯ ಅಧಿಕಾರಿ ಎಂಬ ಪ್ರಶಸ್ತಿಗೂ ಆಕೆ ಪಾತ್ರರಾಗಿದ್ದರು.







