ಕೆಟ್ಟ ಹೆಸರು ಬಂದು, ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಬಿಎಸ್‌ವೈ ಆಡಿಯೋ ಲೀಕ್: ಸಿದ್ದರಾಮಯ್ಯ

ಬೆಂಗಳೂರು, ನ. 5: ‘ನೋಟು ರದ್ದತಿ, ಅವೈಜ್ಞಾನಿಕ ಹಾಗೂ ಅಸಮರ್ಪಕ ಜಿಎಸ್ಟಿ ಜಾರಿ ಮತ್ತು ಕೇಂದ್ರ ಸರಕಾರದ ಆರ್ಥಿಕ ನೀತಿಗಳ ವೈಫಲ್ಯ ದೇಶದ ಆರ್ಥಿಕ ಹಿಂಜರಿತಕ್ಕೆ ಬಹುಮುಖ್ಯ ಕಾರಣಗಳು’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
‘ಹಸಿವಿನ ಪ್ರಮಾಣ ಹೆಚ್ಚಿರುವ 118 ದೇಶಗಳ ಪಟ್ಟಿಯಲ್ಲಿ ಭಾರತ 102ನೆ ಸ್ಥಾನದಲ್ಲಿದೆ. ಇದು ದೇಶದ ಪಾಲಿನ ಕರಾಳ ದಿನಗಳು. ‘ಭಾರತ್ ಮೇ ಸಬ್ ಅಚ್ಚಾ ಹೇ’ ಎಂದರೆ ಇದಾ?’ ಎಂದು ಸಿದ್ದರಾಮಯ್ಯ ಟ್ವೀಟ್ಟರ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ಸರಕಾರ ಬೀಳಿಸುತ್ತೇನೆಂದು ಹೇಳಿಲ್ಲ: ನಮ್ಮ 80 ಜನ ಶಾಸಕರಿದ್ದು ಜೆಡಿಎಸ್ ಪಕ್ಷಕ್ಕೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ರಲ್ಲ ಎಂದು ನಮ್ಮ ಕಾರ್ಯಕರ್ತರೊಬ್ಬರು ಕೇಳಿದ್ದರು. ಅದಕ್ಕೆ ಲೋಕಸಭಾ ಚುನಾವಣೆ ಆಗುವವರೆಗೂ ತಾಳ್ಮೆಯಿಂದಿರಿ, ಚುನಾವಣೆಯ ನಂತರ ಕೂತು ಮಾತನಾಡೋಣ ಎಂದಿದ್ದೆ. ನಾನು ಸರಕಾರ ಬೀಳಿಸುತ್ತೇನೆ ಎಂದು ಹೇಳಿಲ್ಲ, ಆ ಪ್ರಯತ್ನವನ್ನೂ ಮಾಡಿಲ್ಲ’ ಎಂದು ಸಿದ್ದರಾಮಯ್ಯ ಸ್ಪಷ್ಟಣೆ ನೀಡಿದ್ದಾರೆ.
‘ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕೆಟ್ಟ ಹೆಸರು ಬಂದು, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂಬ ಕಾರಣಕ್ಕೆ ಆಡಿಯೋ ಲೀಕ್ ಮಾಡಿದ್ದಾರೆ. ಹಿರಿಯ ನಾಯಕರಷ್ಟೇ ಇರುವ ಬಿಜೆಪಿಯ ಕೋರ್ ಕಮಿಟಿಯಲ್ಲೆ ಯಡಿಯೂರಪ್ಪ ಅವರಿಗೆ ಆಗದವರು ಇದ್ದಾರೆ’ ಎಂದು ಸಿದ್ದರಾಮಯ್ಯ ಟ್ವಿಟ್ಟರ್ ಮೂಲಕ ದೂರಿದ್ದಾರೆ.
ಇದು ನಿರೀಕ್ಷಿತ ರಾಜಕೀಯ
‘ಬಿಜೆಪಿ ಸರಕಾರ ಬೀಳಲು ಬಿಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಜೆಡಿಎಸ್‌ನಿಂದ ಬೇರೇನು ನಿರೀಕ್ಷೆ ಮಾಡಲು ಸಾಧ್ಯ? ಇನ್ನಷ್ಟು ಜೆಡಿಎಸ್ ಶಾಸಕರು ಬಿಜೆಪಿ ಸೇರಬಹುದೆಂಬ ಭಯಕ್ಕೆ ಅವರು ಹಾಗೆ ಮಾತನಾಡಿರಲೂಬಹುದು. ಇದು ನಿರೀಕ್ಷಿತ ರಾಜಕೀಯ ಬೆಳವಣಿಗೆ’
-ಸಿದ್ದರಾಮಯ್ಯ, ವಿಪಕ್ಷ ನಾಯಕ







