2,600 ಕೋ. ರೂ. ಇಪಿಎಫ್ ಹಗರಣ: ಆದಿತ್ಯನಾಥ್ ಸರಕಾರದ ಪಾತ್ರವಿರುವ ದಾಖಲೆ ಬಹಿರಂಗ
ಲಕ್ನೊ, ನ.5: ಉತ್ತರಪ್ರದೇಶದಲ್ಲಿ ಬೆಳಕಿಗೆ ಬಂದಿರುವ 2,600 ಕೋಟಿ ರೂ. ಮೊತ್ತದ ಇಪಿಎಫ್(ಉದ್ಯೋಗಿಗಳ ಭವಿಷ್ಯನಿಧಿ) ಹಗರಣದ ಕುಣಿಕೆ ಈಗ ಅಧಿಕಾರದಲ್ಲಿರುವ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರಕಾರದ ಕುತ್ತಿಗೆಗೆ ಬಿಗಿಯುವ ಸೂಚನೆ ಕಂಡುಬರುತ್ತಿದೆ ಎಂದು ಮೂಲಗಳು ತಿಳಿಸಿವೆ.
ಉತ್ತರಪ್ರದೇಶ ವಿದ್ಯುತ್ ನಿಗಮದ ಉದ್ಯೋಗಿಗಳ ವೇತನದಿಂದ ಕಡಿತ ಮಾಡುವ ಕೋಟ್ಯಂತರ ರೂಪಾಯಿ ಮೊತ್ತದ ನಿಧಿಯನ್ನು ವಿವಾದಾತ್ಮಕ ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್(ಡಿಎಚ್‌ಎಫ್‌ಎಲ್) ಸಂಸ್ಥೆಯಲ್ಲಿ ಹೂಡಿಕೆ ಮಾಡುವ ನಿರ್ಧಾರವನ್ನು ಆದಿತ್ಯನಾಥ್ ನೇತೃತ್ವದ ಸರಕಾರವೇ ಕೈಗೊಂಡಿದೆ ಎಂದು ಹೊಸದಾಗಿ ಬಿಡುಗಡೆಗೊಳಿಸಿರುವ ದಾಖಲೆಪತ್ರ ಬಹಿರಂಗಗೊಳಿಸಿದೆ.
ಉತ್ತರಪ್ರದೇಶ ವಿದ್ಯುತ್ ನಿಗಮದ ಉದ್ಯೋಗಿಗಳ ಇಪಿಎಫ್ ನಿಧಿಯನ್ನು ಡಿಎಚ್‌ಎಫ್‌ಎಲ್‌ನಲ್ಲಿ ಹೂಡಿಕೆ ಮಾಡುವ ನಿರ್ಧಾರವನ್ನು ಅಖಿಲೇಶ್ ಯಾದವ್ ನೇತೃತ್ವದ ಈ ಹಿಂದಿನ ಸರಕಾರ ಕೈಗೊಂಡಿದೆ ಎಂದು ಉತ್ತರಪ್ರದೇಶದ ವಿದ್ಯುತ್ ಸಚಿವ ಶ್ರೀಕಾಂತ್ ಶರ್ಮ ಆರೋಪಿಸಿದ್ದರು.
ಆದರೆ ಆದಿತ್ಯನಾಥ್ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ 5 ದಿನಗಳ ಬಳಿಕ, ಅಂದರೆ 2017ರ ಮಾರ್ಚ್ 24ರಂದು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿರುವ ಉತ್ತರಪ್ರದೇಶ ವಿದ್ಯುತ್ ಕ್ಷೇತ್ರ ನೌಕರರ ಟ್ರಸ್ಟ್, ಅಂದು ನಡೆದ ಸಭೆಯ ಕಾರ್ಯಕಲಾಪದ ವರದಿಯ ಪ್ರತಿಯನ್ನು ಅರ್ಜಿಯ ಜೊತೆ ಸಲ್ಲಿಸಿದೆ.
ಇಪಿಎಫ್ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸುವ ರಾಜ್ಯ ಸರಕಾರದ ನಿರ್ಧಾರವನ್ನು ವಿದ್ಯುತ್ ನಿಗಮದ ಉದ್ಯೋಗಿಗಳ ಯೂನಿಯನ್ ಮುಖಂಡ ಶೈಲೇಂದ್ರ ದುಬೆ ಸ್ವಾಗತಿಸಿದ್ದಾರೆ. ಆದರೆ ಡಿಎಚ್‌ಎಫ್‌ಎಲ್ ವಿಷಯಕ್ಕೆ ಸಂಬಂಧಿಸಿದ ಫೈಲುಗಳ ಸುರಕ್ಷತೆಯನ್ನು ಖಾತರಿಗೊಳಿಸಲು ಮುಖ್ಯಮಂತ್ರಿ ವಿದ್ಯುತ್ ಸಚಿವಾಲಯದ ಉನ್ನತ ಅಧಿಕಾರಿಗಳನ್ನು ವರ್ಗಾಯಿಸಬೇಕು ಎಂದವರು ಒತ್ತಾಯಿಸಿದ್ದಾರೆ.
ರಾಜ್ಯ ಸರಕಾರದ ಅಧೀನದಲ್ಲಿರುವ ಯುಪಿ ವಿದ್ಯುತ್ ನಿಗಮ(ಯುಪಿಪಿಸಿಲ್)ನ ಉದ್ಯೋಗಿಗಳ ಭವಿಷ್ಯ ನಿಧಿಯ ಸುಮಾರು 2,600 ಕೋಟಿ ರೂ. ಮೊತ್ತವನ್ನು ಡಿಎಚ್‌ಎಫ್‌ಎಲ್‌ನಲ್ಲಿ ಹೂಡಿಕೆ ಮಾಡಿರುವುದನ್ನು ಪ್ರಶ್ನಿಸಿ ಲಕ್ನೊ ಪೊಲೀಸ್ ಠಾಣೆಗೆ ಸಲ್ಲಿಸಿರುವ ದೂರಿನ ಹಿನ್ನೆಲೆಯಲ್ಲಿ ಎಫ್‌ಐಆರ್‌ನಲ್ಲಿ ದಾಖಲಾಗಿದೆ.
ಕುಖ್ಯಾತ ಕ್ರಿಮಿನಲ್ ದಾವೂದ್ ಇಬ್ರಾಹಿಂನ ಬಂಟ ಇಕ್ಬಾಲ್ ಮಿರ್ಚಿಯ ಜೊತೆಗೆ ಡಿಎಚ್‌ಎಫ್‌ಎಲ್‌ನ ನಿರ್ದೇಶಕರು ನಂಟು ಹೊಂದಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ನಿರ್ದೇಶಕರನ್ನು ಜಾರಿ ನಿರ್ದೇಶನಾಲಯ ಇತ್ತೀಚೆಗೆ ವಿಚಾರಣೆ ನಡೆಸಿತ್ತು.
ಈ ಮಧ್ಯೆ, ಯುಪಿ ವಿದ್ಯುತ್ ನಿಗಮದ ಆಡಳಿತ ನಿರ್ದೇಶಕಿ ಅಪರ್ಣಾರನ್ನು ವಜಾಗೊಳಿಸಿರುವ ಉತ್ತರಪ್ರದೇಶ ಸರಕಾರ, ಹಿರಿಯ ಐಎಎಸ್ ಅಧಿಕಾರಿ ಎಂ ದೇವರಾಜ್‌ರನ್ನು ನೇಮಿಸಿದೆ.