ಕಾಶ್ಮೀರ: ಅಪ್ರಾಪ್ತರ ಬಂಧನದ ಕುರಿತ ಆರೋಪಗಳ ಮರು ತನಿಖೆಗೆ ಸುಪ್ರೀಂ ಸೂಚನೆ

ಹೊಸದಿಲ್ಲಿ, ನ.5: ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿ ಬಳಿಕ ಭದ್ರತಾ ಪಡೆಗಳು ಅಪ್ರಾಪ್ತ ವಯಸ್ಕರನ್ನು ಬಂಧನದಲ್ಲಿ ಇಟ್ಟಿರುವ ಕುರಿತ ಆರೋಪಗಳನ್ನು ಮತ್ತೆ ಹೊಸದಾಗಿ ತನಿಖೆ ನಡೆಸಬೇಕೆಂದು ಸುಪ್ರೀಂ ಕೋರ್ಟ್ ಜಮ್ಮು ಕಾಶ್ಮೀರ ಹೈಕೋರ್ಟ್‌ನ ಬಾಲರ ನ್ಯಾಯ ಸಮಿತಿಗೆ ಸೂಚಿಸಿದೆ.
ದೂರಿನ ಬಗ್ಗೆ ತ್ವರಿತವಾಗಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ 4 ಸದಸ್ಯರ ಬಾಲರ ನ್ಯಾಯ ಸಮಿತಿಗೆ ಸೂಚಿಸಿದ್ದ ನ್ಯಾ. ಎನ್‌ವಿ ರಮಣ ನೇತೃತ್ವದ ನ್ಯಾಯಪೀಠ ವಿಚಾರಣೆಯನ್ನು ಡಿಸೆಂಬರ್ 3ಕ್ಕೆ ನಿಗದಿಗೊಳಿಸಿದೆ.
ಸಮಯದ ನಿರ್ಬಂಧದ ಹಿನ್ನೆಲೆಯಲ್ಲಿ ಸಮಿತಿಯ ಈ ಹಿಂದಿನ ವರದಿ ಸುಪ್ರೀಂಕೋರ್ಟ್‌ನ ಆದೇಶಕ್ಕೆ ಅನುಗುಣವಾಗಿ ಇರದ ಕಾರಣ ದೂರುಗಳನ್ನು ಮತ್ತೆ ಹೊಸದಾಗಿ ವಿಚಾರಣೆ ನಡೆಸುವ ಅಗತ್ಯವಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿದ ಬಳಿಕ ಹಲವರನ್ನು ಭದ್ರತಾ ಪಡೆಗಳು ಬಂಧಿಸಿದ್ದು ಇದರಲ್ಲಿ ಅಪ್ರಾಪ್ತ ವಯಸ್ಕರೂ ಸೇರಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭ ಸುಪ್ರೀಂಕೋರ್ಟ್ ಈ ಸೂಚನೆ ನೀಡಿದೆ.





