ಅತಿಥಿ ಉಪನ್ಯಾಸಕರ ಸೇವೆ ಖಾಯಂಗೊಳಿಸಲು ಆಗ್ರಹಿಸಿ ಡಿಸಿಗೆ ಮನವಿ

ಉಡುಪಿ, ನ.5: ಅತಿಥಿ ಉಪನ್ಯಾಸಕರ ಸೇವೆಯನ್ನು ಖಾಯಂಗೊಳಿಸು ವಂತೆ ಆಗ್ರಹಿಸಿ ಸರಕಾರಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿಯ ಉಡುಪಿ ಜಿಲ್ಲಾ ಘಟಕದಿಂದ ಇಂದು ಉಡುಪಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯದ 412 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 12,800ಕ್ಕೂ ಅಧಿಕ ಅತಿಥಿ ಉಪನ್ಯಾಸಕರನ್ನು ಖಾಯಂ ಮಾಡಬೇಕೆಂದು ಆಗ್ರಹಿಸಿ ವಿವಿಧ ಹಂತ ಗಳಲ್ಲಿ ಹೋರಾಟಗಳನ್ನು ನಡೆಸಲಾಗಿದೆ. ಪ್ರಸ್ತುತ ರಾಜ್ಯ ಸರಕಾರ 1242 ಪ್ರಾಚಾರ್ಯರು ಮತ್ತು ಸಹಾಯಕ ಪ್ರಾಧ್ಯಾಪಕರನ್ನು ನೇಮಕಾತಿ ಮಾಡುತ್ತಿ ರುವುದು ಸರಿಯಲ್ಲ. ಇದರಿಂದಾಗಿ 2500 ಅತಿಥಿ ಉಪನ್ಯಾಸಕರು ತಾತ್ಕಾಲಿಕ ಕೆಲಸ ಕಳೆದುಕೊಂಡು ಬೀದಿ ಪಾಲಾಗಲಿದ್ದಾರೆ ಎಂದು ಮನವಿಯಲ್ಲಿ ದೂರಲಾಗಿದೆ.
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 5-6 ತಿಂಗಳಾದರೂ ಕೆಲವು ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಿಗೆ ವೇತನ ದೊರೆತಿಲ್ಲ. ಕೆಲವರಿಗೆ ವೇತನ ಬಂದರೂ ಅದು ಕೇವಲ ಒಂದು ತಿಂಗಳದ್ದು ಮಾತ್ರ. ಅನೇಕ ವರ್ಷಗಳಿಂದ ಇಎಸ್‌ಐ, ಪಿಎಫ್ ಸೌಲಭ್ಯವಿಲ್ಲ. ಆದ್ದರಿಂದ ಹೊಸ ನೇಮಕಾತಿಗೆ ಮೊದಲು ಅತಿಥಿ ಉಪನ್ಯಾಸಕರ ಸೇವೆಯನ್ನು ಸಕ್ರಮಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಸರಕಾರ ಕೂಡಲೇ ಇದಕ್ಕೆ ಸಂಬಂಧಿಸಿದ ಕಡತವನ್ನು ಸಂಪುಟ ಸಮಿತಿಯ ಮುಂದೆ ತಂದು ಜೇಒಸಿ ಮಾದರಿಯಲ್ಲಿ ಅತಿಥಿ ಉಪನ್ಯಾಸಕರ ಸೇವೆಯನ್ನು ವಿಲೀನಗೊಳಿಸಿ ಖಾಯಂ ಮಾಡುವುದರ ಮೂಲಕ ನ್ಯಾಯ ದೊರಕಿಸಿ ಕೊಡ ಬೇಕು ಮತ್ತು 2019-20ನೇ ಸಾಲಿನ ಗೌರವಧನ ಹೆಚ್ಚಳವನ್ನು ಈ ಸಾಲಿನ ಶೈಕ್ಷಣಿಕ ಅವಧಿಪೂರ್ವದಿಂದಲೇ ಜಾರಿಗೊಳಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಸಮಿತಿಯ ರಾಜ್ಯ ಜಂಟಿ ಕಾರ್ಯದರ್ಶಿ ಮಂಜಪ್ಪದ್ಯಾ ಗೋಣಿ, ಜಿಲ್ಲಾಧ್ಯಕ್ಷ ಡಾ.ಶಾಹಿದಾ ಕೋಟ, ಕಾರ್ಯದರ್ಶಿಗಳಾದ ಸಂತೋಷ್, ನಮಿತಾ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.







