ಸುಪ್ರೀಂ ಕೋರ್ಟ್ ತನಿಖೆಗೆ ಆದೇಶಿಸುವಂತೆ ರಾಷ್ಟ್ರಪತಿಗಳನ್ನು ಕೋರಲಿರುವ ಪ್ರತಿಪಕ್ಷಗಳು
ವಾಟ್ಸ್‌ಆ್ಯಪ್ ಬೇಹುಗಾರಿಕೆ ವಿವಾದ

ಹೊಸದಿಲ್ಲಿ,ನ.5: ಹಲವಾರು ಭಾರತೀಯರ ವಾಟ್ಸ್‌ಆ್ಯಪ್ ಖಾತೆಗಳಿಗೆ ಕನ್ನ ಹಾಕಿರುವ ಹಗರಣವನ್ನು ಇನ್ನಷ್ಟು ಕೆದಕಲು ಪ್ರತಿಪಕ್ಷವು ನಿರ್ಧರಿಸಿದೆ. ವಾಟ್ಸ್‌ಆ್ಯಪ್ ಬೇಹುಗಾರಿಕೆ ಹಗರಣ ಕುರಿತು ಸರ್ವೋಚ್ಚ ನ್ಯಾಯಾಲಯದ ನಿಗಾದಲ್ಲಿ ತನಿಖೆಗೆ ಆದೇಶಿಸುವಂತೆ ಕೋರಿ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು ಗುಂಪು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಅಹವಾಲನ್ನು ಸಲ್ಲಿಸುವ ನಿರೀಕ್ಷೆಯಿದೆ.
ನ.18ರಿಂದ ಆರಂಭಗೊಳ್ಳಲಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿಯೂ ಈ ವಿಷಯವನ್ನು ಪ್ರಸ್ತಾಪಿಸಲು ಪ್ರತಿಪಕ್ಷಗಳು ನಿರ್ಧರಿಸಿವೆ.
ದೇಶವನ್ನು ಮತ್ತು ಜನರನ್ನು ಕಾಡುತ್ತಿರುವ ವಿಷಯಗಳನ್ನು ಚರ್ಚಿಸಲು 13 ಸಮಾನ ಮನಸ್ಕ ಪಕ್ಷಗಳ ನಾಯಕರು ಸೋಮವಾರ ಇಲ್ಲಿ ಸಭೆ ಸೇರಿದ್ದು,ದಿಲ್ಲಿಯಲ್ಲಿ ಜಂಟಿ ಪ್ರತಿಭಟನೆಯನ್ನು ನಡೆಸಲು ಮತ್ತೆ ಸಭೆ ಸೇರಲು ನಿರ್ಧರಿಸಿವೆ.
ಸಭೆಯಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಝಾದ್ ಅವರು,ವಾಟ್ಸ್‌ಆ್ಯಪ್ ಬೇಹುಗಾರಿಕೆ ಬಗ್ಗೆ ಚರ್ಚಿಸಲು ಮತ್ತು ಮುಂದಿನ ಕ್ರಮವನ್ನು ನಿರ್ಧರಿಸಲು ಪ್ರತಿಪಕ್ಷಗಳು ಶೀಘ್ರವೇ ಇನ್ನೊಮ್ಮೆ ಸಭೆ ಸೇರಲಿವೆ ಎಂದು ತಿಳಿಸಿದರು. ತನ್ನ ನಾಯಕಿ ಪ್ರಿಯಾಂಕಾ ಗಾಂಧಿ ಅವರ ವಾಟ್ಸ್‌ಆ್ಯಪ್ ಖಾತೆಯನ್ನು ಹ್ಯಾಕ್ ಮಾಡಲಾಗಿತ್ತು ಎಂಬ ಶಂಕೆಯನ್ನು ವ್ಯಕ್ತಪಡಿಸಿ ವಾಟ್ಸ್‌ಆ್ಯಪ್ ಅವರಿಗೆ ಸಂದೇಶವನನ್ನು ಕಳುಹಿಸಿದೆ ಎಂದು ಕಾಂಗ್ರೆಸ ರವಿವಾರ ಹೇಳಿತ್ತು.
ವಾಟ್ಸ್‌ಆ್ಯಪ್ ಕುರಿತು ರಾಜಕೀಯ ವಿವಾದವು ಕಾವು ಪಡೆದುಕೊಳ್ಳುತ್ತಿದ್ದು,ಕಾಂಗ್ರೆಸ್ ನಾಯಕರ ನೇತೃತ್ವದ ಗೃಹ ವ್ಯವಹಾರಗಳು ಮತ್ತು ಮಾಹಿತಿ ತಂತ್ರಜ್ಞಾನ ಕುರಿತು ಸಂಸದೀಯ ಸ್ಥಾಯಿ ಸಮಿತಿಗಳು ಬೇಹುಗಾರಿಕೆ ಆರೋಪಗಳಿಗೆ ಸಂಬಂಧಿಸಿದಂತೆ ಗೃಹ ಸಚಿವಾಲಯ ಸೇರಿದಂತೆ ಉನ್ನತ ಸರಕಾರಿ ಅಧಿಕಾರಿಗಳಿಂದ ವಿವರಣೆಯನ್ನು ಕೋರುವ ಸಾಧ್ಯತೆಗಳಿವೆ.
ಎಐಎಂಐಎಂ ವರಿಷ್ಠ ಹಾಗೂ ಹೈದರಾಬಾದ್ ಸಂಸದ ಅಸದುದ್ದೀನ್ ಉವೈಸಿ ಅವರೂ ಕೇಂದ್ರದ ವಿರುದ್ಧ ದಾಳಿ ನಡೆಸಿದ್ದು,ಇಸ್ರೇಲ್‌ನ ತಂತ್ರಜ್ಞಾನ ಸಂಸ್ಥೆಯು ಭಾರತೀಯರ ವಾಟ್ಸ್‌ಆ್ಯಪ್ ಸಂಭಾಷಣೆಗಳನ್ನು ಆಲಿಸಿದ್ದು ಹೇಗೆ ಎಂದು ಅಲ್ಲಿಯ ಸರಕಾರವನ್ನು ಪ್ರಶ್ನಿಸುವಂತೆ ಕೇಂದ್ರವನ್ನು ಅಗ್ರಹಿಸಿದ್ದಾರೆ.
ಹಗರಣದ ಬಗ್ಗೆ ಕೇಂದ್ರದಿಂದ ತನಿಖೆಗೆ ಆಗ್ರಹಿಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು,ವಾಟ್ಸ್‌ಆ್ಯಪ್‌ನಲ್ಲಿ ಭದ್ರತೆಯ ಉಲ್ಲಂಘನೆಯ ಬಗ್ಗೆ ಸರಕಾರಕ್ಕೆ ಸಂಪೂರ್ಣವಾಗಿ ತಿಳಿದಿತ್ತು ಎಂದು ಆರೋಪಿಸಿದ್ದಾರೆ.







