ಮುಂದಿನ ಮಾರ್ಚ್ ಒಳಗೆ ಕಾಮಗಾರಿ ಮುಗಿಯದಿದ್ದರೆ ಟೋಲ್ ರದ್ದು: ಗುತ್ತಿಗೆ ಕಂಪೆನಿಗೆ ಅಂತಿಮ ಎಚ್ಚರಿಕೆ
ಪತ್ರಕರ್ತರೊಂದಿಗೆ ಸಂವಾದದಲ್ಲಿ ಜಿಲ್ಲಾಧಿಕಾರಿ ಜಗದೀಶ್

ಉಡುಪಿ, ನ.5: ಹೆಜಮಾಡಿಯಿಂದ ಕುಂದಾಪುರದವರೆಗಿನ ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿಯನ್ನು 2020ರ ಮಾರ್ಚ್ ತಿಂಗಳ ಕೊನೆಯೊಳಗೆ ಪೂರ್ಣಗೊಳಿಸದಿದ್ದರೆ, ಗುತ್ತಿಗೆ ಕಂಪೆನಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದು ಮಾತ್ರವಲ್ಲದೇ, ಒಪ್ಪಂದದಂತೆ ಜಿಲ್ಲೆಯ ಎರಡು ಕಡೆಗಳಲ್ಲಿ ಇರುವ ಟೋಲ್‌ಗಳನ್ನು ರದ್ದುಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದ್ದಾರೆ.
ಉಡುಪಿ ಜಿಲ್ಲೆಯ ವಿವನಿಧ ಸಮಸ್ಯೆಗಳ ಕುರಿತಂತೆ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರೊಂದಿಗೆ ಮಂಗಳವಾರ ಬ್ರಹ್ಮಗಿರಿಯ ಪತ್ರಕರ್ತರ ಭವನದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸುತಿದ್ದರು.
ತಾನು ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಈ ಹಿಂದೆ ಎರಡು ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗಳ ಕುರಿತು ಸಭೆಯನ್ನು ನಡೆಸಿದ್ದೆ. ಕ್ಷೇತ್ರದ ಸಂಸತ್ ಸದಸ್ಯರಾದ ಶೋಭಾ ಕರಂದ್ಲಾಜೆ ಅವರ ಸೂಚನೆಯಂತೆ ಸೋಮವಾರ ಕುಂದಾಪುರದಲ್ಲಿ ಶಾಸಕರು, ರಾ.ಹೆದ್ದಾರಿ ಅಧಿಕಾರಿಗಳು, ಗುತ್ತಿಗೆ ಕಂಪೆನಿಯ ಅಧಿಕಾರಿಗಳ ಸಭೆಯನ್ನು ನಡೆಸಿದ್ದು, ಇದರಲ್ಲಿ ಅವರಿಗೆ ಈ ಕುರಿತು ಸ್ಪಷ್ಟವಾದ ಸೂಚನೆಯನ್ನು ನೀಡಲಾಗಿದೆ ಎಂದರು.
2013ರಲ್ಲಿ ಈ ಕಾಮಗಾರಿಗಳು ಮುಕ್ತಾಯಗೊಳ್ಳಬೇಕಿತ್ತು. ನಾನಾ ಕಾರಣಗಳಿಗಾಗಿ ಅದನ್ನು ಮುಂದೂಡುತ್ತಾ ಬರಲಾಗಿದೆ. ಈಗ ಎರಡು- ಮೂರು ಕಾಮಗಾರಿಗಳು ಉಳಿದುಕೊಂಡಿವೆ. ಪಡುಬಿದ್ರಿ ಸೇತುವೆ ಹಾಗೂ ಕುಂದಾಪುರ ಶಾಸ್ತ್ರಿ ಸರ್ಕಲ್‌ನ ಪ್ಲೈಓವರ್ ಹಾಗೂ ಕುಂದಾಪುರ ಬಸ್ರೂರು ಮೂರುಕೈ ಅಂಡರ್‌ಪಾಸ್ ಕಾಮಗಾರಿಯನ್ನು ಮುಂದಿನ ಮಾರ್ಚ್ ತಿಂಗಳ ಕೊನೆಯೊಳಗೆ ಮುಗಿಸಲು ಗಡುವು ನೀಡಲಾಗಿದೆ ಎಂದರು.
ಅಂತಿಮ ಗಡುವಿನೊಳಗೆ ಅವರು ಕಾಮಗಾರಿಯನ್ನು ಪೂರ್ಣಗೊಳಿಸದಿದ್ದರೆ, ಗುತ್ತಿಗೆ ಕಂಪೆನಿಯ ವಿರುದ್ಧ ಸೂಕ್ತ ಕ್ರಮಕೈಗೊಂಡು ಅವರ ಗುತ್ತಿಗೆಯನ್ನು ರದ್ದು ಪಡಿಸಲು ರಾ.ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ತಿಳಿಸಲಾಗಿದೆ. ಅಲ್ಲದೇ ಒಪ್ಪಂದದಂತೆ ಸಾಸ್ತಾನ ಹಾಗೂ ಹೆಜಮಾಡಿ ಟೋಲ್‌ಗೇಟ್‌ಗಳನ್ನು ಬಂದ್ ಮಾಡಲಾಗುವುದು ಎಂದವರು ಎಚ್ಚರಿಸಿದರು.
ಕಾಮಗಾರಿ ಪೂರ್ಣಗೊಳ್ಳಲು ಟೋಲ್ ಸಂಗ್ರಹಿಸುತ್ತಿರುವ ಬಗ್ಗೆ ಕೇಳಿದಾಗ, ಶೇ.75ರಷ್ಟು ಕಾಮಗಾರಿ ಪೂರ್ಣಗೊಂಡರೆ ಟೋಲ್ ಸಂಗ್ರಹಿಸಲು ಗುತ್ತಿಗೆ ದಾರರಿಗೆ ಒಪ್ಪಂದದಲ್ಲಿ ಅವಕಾಶವಿದೆ. ಇದಕ್ಕೆ ನಾವು ನಿಗದಿ ಪಡಿಸಿದ ಅವಧಿಯೊಳಗೆ ಅವರು ಕಾಮಗಾರಿ ಪೂರ್ಣಗೊಳಿಸಬೇಕು. ಆದರೆ 2016ರಲ್ಲಿ ಪಡುಬಿದ್ರಿ, ಕುಂದಾಪುರಗಳಲ್ಲಿ ‘ಕೆಲಸದಲ್ಲಿ ಬದಲಾವಣೆ’ಯನ್ನು ಮಾಡಿರುವುದರಿಂದ ಅವರ ಕಾಲಾವಧಿಯನ್ನು ವಿಸ್ತರಿಸಲಾಯಿತು. ಇದೀಗ ಮುಂದಿನ ಮಾರ್ಚ್‌ಗೆ ಅವರಿಗೆ ಅಂತಿಮ ಗಡುವು ನೀಡಲಾಗಿದೆ ಎಂದರು.
ಉಡುಪಿ ನಗರದಲ್ಲಿ ಪಾರ್ಕಿಂಗ್ ಅವ್ಯವಸ್ಥೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಇನ್ನು ಮುಂದೆ ಕಟ್ಟಡ ನಿರ್ಮಿಸುವ ಸಮಯದಲ್ಲಿ ಪಾರ್ಕಿಂಗ್‌ಗಾಗಿ ಸೆಲ್ಲಾರ್‌ನ್ನು ನಿಗದಿ ಪಡಿಸುವುದು ಕಡ್ಡಾಯವಾಗಿದ್ದು, ಅದನ್ನು ಅನ್ಯ ಕಾರ್ಯಗಳಿಗೆ ಬಳಸಿದರೆ ತೀವ್ರ ಕೈಗೊಳ್ಳಲಾಗುತ್ತದೆ. ಈಗಾಗಲೇ ನಿರ್ಮಾಣವಾಗಿರುವ ಬಹುಮಹಡಿ ಕಟ್ಟಡಗಳಲ್ಲಿ ಸೆಲ್ಲಾರ್‌ಗಾಗಿ ನಿಗದಿ ಪಡಿಸಿದ ಜಾಗವನ್ನು ಪಾರ್ಕಿಂಗ್ ಉದ್ದೇಶಕ್ಕೇ ಮಾತ್ರವೇ ಬಳಸಬೇಕು, ಅನ್ಯ ಉದ್ದೇಶಕ್ಕೆ ಬಳಸಿದ್ದರೆ ಅದನ್ನು ತೆರವುಗೊಳಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪೌರಾಯುಕ್ತರಿಗೆ ಸೂಚಿಸುವುದಾಗಿ ಜಿಲ್ಲಾಧಿಕಾರಿ ಹೇಳಿದರು.
ತ್ಯಾಜ್ಯ ಸಂಸ್ಕರಣಾ ಘಟಕ: ಅಲೆವೂರು ಸಮೀಪದ ಕರ್ವಾಲಿನಲ್ಲಿರುವ ತ್ಯಾಜ್ಯ ಸಂಸ್ಕರಣ ಘಟಕ ಈಗ ಡಂಪಿಂಗ್ ಯಾರ್ಡ್ ಆಗಿರುವ ಬಗ್ಗೆ ಅವರ ಗಮನ ಸೆಳೆದಾಗ, ತಮಿಳುನಾಡಿನ ಕಂಪೆನಿಯೊಂದು ಬಯೋ ಮೈನಿಂಗ್ ಮಾಡುವ ಕುರಿತು ಪರಿಶೀಲನೆಗೆ ಬರುತಿದ್ದು, ಅವರ ಪ್ರಸ್ತಾಪ ಪರಿಶೀಲಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ತ್ಯಾಜ್ಯ ಸಂಸ್ಕರಣೆ ಘಟಕದ ಸ್ಥಾಪನೆಗೆ 40 ಗ್ರಾಪಂಗಳಲ್ಲಿ ಜಾಗವನ್ನು ಗುರುತಿಸಿ ಒಪ್ಪಿಗೆಯನ್ನು ನೀಡಲಾಗಿದೆ. ಇನ್ನೂ 5-6 ಪಂಚಾಯತ್‌ಗಳಿಗೆ ಒಂದು ವಾರದಲ್ಲಿ ಜಾಗ ಅಂತಿಮಗೊಳಿಸಲಾಗುವುದು. ತಾವು ಹಾಗೂ ಸಿಇಓ ಎಲ್ಲೆಲ್ಲಾ ಜಾಗ ಲಭ್ಯವಿದೆ ಅಲ್ಲಿ ಘಟಕ ಸ್ಥಾಪನೆಗೆ ಕ್ರಮ ಕೈಗೊಳ್ಳುತ್ತೇನೆ ಎಂದರು.
ವಾರಾಹಿ ನೀರು: ಉಡುಪಿಗೆ ವಾರಾಹಿಯಿಂದ ಕುಡಿಯುವ ನೀರು ತರುವ ಯೋಜನೆಗೆ ಟೆಂಡರ್ ಆಗಿದ್ದು, ಹಾಲಾಡಿ ಬಳಿ ನೀರು ಸಂಸ್ಕರಣಾ ಘಟಕದ ಸ್ಥಾಪನೆಗೆ ಜಾಗದ ಹುಡುಕಾಟ ನಡೆದಿದೆ. ಒಂದು ಜಾಗವನ್ನು ಗುರುತಿಸಿದ್ದು, ಅದನ್ನು ಪರಿಶೀಲಿಸಿ ಅಂತಿಮಗೊಳಿಸಲು ಬಾಕಿ ಇದೆ ಎಂದರು.
ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನರುಜ್ಜೀವನಗೊಳಿಸಲು, ಕಾರ್ಖಾನೆಯ ಆಡಳಿತ ಮಂಡಳಿಯೊಂದಿಗೆ ಮಾತನಾಡುತ್ತೇನೆ. ಜಿಲ್ಲಾಡಳಿತದ ಕಡೆಯಿಂದ ಏನೇಲ್ಲಾ ಮಾಡಲು ಸಾಧ್ಯವೋ ಅದನ್ನು ಮಾಡುವುದಾಗಿ ತಿಳಿಸಿದರು. ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ಇದರಲ್ಲಿ ಯಾವುದೇ ತಾರತಮ್ಯ ಧೋರಣೆ ಇರುವುದಿಲ್ಲ ಎಂದವರು ಸ್ಪಷ್ಟ ಪಡಿಸಿದರು.
ಹೆಜಮಾಡಿ ಬಂದರು ಅಭಿವೃದ್ಧಿಗೆ ಸರಕಾರಿ ಜಾಗವನ್ನು ಗುರುತಿಸಲಾಗಿದೆ. ಬೇಕಾದ ಖಾಸಗಿಯವರ ಜಾಗದ ಸರ್ವೆ ನಂ.ಗಳನ್ನು ಗುರುತಿಸಿ ಮಾಲಕ ರೊಂದಿಗೆ ಮಾತುಕತೆ ನಡೆಸಿ ಖರೀದಿಸಲು ಈಗಾಗಲೇ ಕ್ರಮಕೈಗೊಳ್ಳಲಾಗಿದೆ ಎಂದರು.
ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಷಾ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ್ ಪ್ರಸಾದ್ ಪಾಂಡೇಲು, ಪ್ರಧಾನಕಾರ್ಯದರ್ಶಿ ಸಂತೋಷ್ ಸರಳೇಬೆಟ್ಟು, ಕೋಶಾಧಿಕಾರಿ ದಿವಾಕರ್, ರಾಜ್ಯ ಸಮಿತಿ ಜಿಲ್ಲಾ ಪ್ರತಿನಿಧಿ ಕಿರಣ್ ಮಂಜನಬೈಲು ಉಪಸ್ಥಿತರಿದ್ದರು.







