ನ. 22ರಿಂದ ಕಟೀಲು ಮೇಳಗಳ ತಿರುಗಾಟ ಆರಂಭ
ಮಂಗಳೂರು, ನ.5: ಕಟೀಲು ಶ್ರೀದುರ್ಗಾಪರಮೇಶ್ವರಿ ಯಕ್ಷಗಾನ ಮೇಳಗಳ ತಿರುಗಾಟಕ್ಕೆ ದಿನ ಸಮೀಪಿಸುತ್ತಿದೆ. ಈ ಕುರಿತ ಪ್ರಕರಣ ರಾಜ್ಯ ಹೈಕೋರ್ಟ್‌ನಲ್ಲಿದ್ದು ಇನ್ನೂ ಇತ್ಯರ್ಥಗೊಂಡಿಲ್ಲ. ಈ ಮಧ್ಯೆ ಕಟೀಲಿನ ಆರು ಮೇಳಗಳ ತಿರುಗಾಟಕ್ಕೆ ಸಿದ್ಧತೆಗಳು ನಡೆಯುತ್ತಿವೆ. ನ.22ರಿಂದ ಎಂದಿನಂತೆ ತಿರುಗಾಟ ಆರಂಭವಾಗಲಿದೆ.
ಕಟೀಲು ದೇವಸ್ಥಾನದ ಮೂಲಕ ಪ್ರಕಟವಾಗುವ ಯಕ್ಷಪ್ರಭಾ ಪತ್ರಿಕೆಯಲ್ಲಿ ಈ ಕುರಿತು ಪ್ರಕಟನೆ ಹೊರಬಿದ್ದಿದೆ. ಇದರಲ್ಲಿ ಈ ಬಾರಿಯ ತಿರುಗಾಟ ನ.22ರಂದು ಕಟೀಲಿನಲ್ಲಿ ಸೇವೆಯಾಟ ನಡೆಸಿದ ಬಳಿಕ ಆರು ಮೇಳಗಳ ತಿರುಗಾಟ ನಡೆಯಲಿದೆ. ಸೇವಾಕರ್ತರು ಸೇವೆಯಾಟ ದಿನದಂದು ಆಗಮಿಸಿ ತಮ್ಮ ಸೇವೆಯನ್ನು ದೃಢಪಡಿಸಿಕೊಳ್ಳುವಂತೆ ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಈ ಪ್ರಕಟನೆಯಲ್ಲಿ ದೇವಿಪ್ರಸಾದ್ ಶೆಟ್ಟಿ, ಸಂಚಾಲಕರು, ಕಟೀಲು ಮೇಳಗಳು ಎಂದು ನಮೂದಿಸಲಾಗಿದೆ. ಅಲ್ಲದೆ, ನವೆಂಬರ್ ತಿಂಗಳಲ್ಲಿ ನಡೆಯುವ ಆರು ಮೇಳಗಳ ಸೇವಾ ಪ್ರದರ್ಶನದ ವಿವರವನ್ನು ನೀಡಲಾಗಿದೆ. ಇದರೊಂದಿಗೆ ಕಟೀಲು ಮೇಳ ಈ ಬಾರಿ ಖಾಸಗಿ ಯಜಮಾನಿಕೆಯಲ್ಲೇ ಹಿಂದಿನಂತೆ ತಿರುಗಾಟ ನಡೆಸುವ ಮುನ್ಸೂಚನೆ ನೀಡಿದಂತಾಗಿದೆ.
ಈ ಮಧ್ಯೆ ಕಟೀಲು ಮೇಳವನ್ನು ಏಲಂ ನಡೆಸುವಂತೆ ಬಂಡೆದ್ದ ಕಲಾವಿದರು ಪಟ್ಟುಹಿಡಿಯಲು ನಿರ್ಧರಿಸಿದ್ದು, ಮಂಗಳವಾರ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿದ್ದಾರೆ. ಖಾಸಗಿ ಯಜಮಾನಿಕೆಯಲ್ಲಿ ಮೇಳದ ತಿರುಗಾಟ ಕುರಿತು ಯಕ್ಷಗಾನ ಪತ್ರಿಕೆಯಲ್ಲಿ ಪ್ರಕಟನೆ ಹೊರಡಿಸಿರುವುದನ್ನು ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮುಜರಾಯಿ ಆಯುಕ್ತರು ಆದೇಶ ಹೊರಡಿಸಿ, ಅದನ್ನು ಏಲಂಗೆ ತಡೆಯಾಜ್ಞೆ ನೀಡಿರುವ ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಇದರ ವಿಚಾರಣೆಯನ್ನು ತ್ವರಿವಾಗಿ ನಡೆಸುವಂತೆ ಕೋರಿದ್ದರು. ಅಲ್ಲದೆ ಇನ್ನೊಂದು ಪ್ರತಿಯನ್ನು ಕಾನೂನು ಸಲಹೆಗಾರರಿಗೂ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ನ.8ರಂದು ಏಲಂ ಕುರಿತ ತಡೆಯಾಜ್ಞೆ ಪ್ರಕರಣದ ಕುರಿತು ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುವ ಸಂಭವ ಇದೆ ಎಂದು ಮೂಲಗಳು ತಿಳಿಸಿವೆ.







