ಆದಿಜಾಂಬವ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗೆ ಅರ್ಜಿ ಆಹ್ವಾನ
ಉಡುಪಿ, ನ. 5: 2019-20ನೇಸಾಲಿಗೆ ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮದಿಂದ ಉದ್ಯಮಶೀಲತಾ ಅಭಿವೃದ್ಧಿ ಯೋಜನೆ, ಭೂಒಡೆತನ ಯೋಜನೆ, ಮೈಕ್ರೋ ಕ್ರೆಡಿಟ್ (ಪ್ರೇರಣಾ) ಯೋಜನೆ ಹಾಗೂ ಗಂಗಾ ಕಲ್ಯಾಣ ಯೋಜನೆಗಳಡಿ ಸಮಗಾರ, ಮೋಚಿ, ಮಾದಿಗ ಮತ್ತು ಸಂಬಂಧಿತ ಜಾತಿಗೆ ಸೇರಿದ ಅರ್ಹ ಪಲಾಪೇಕ್ಷಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿದಾರರು ಮತ್ತು ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ/ಅರೆ ಸರ್ಕಾರಿ ಸಂಸ್ಥೆಯಲ್ಲಿ ನೌಕರಿಯಲ್ಲಿರಬಾರದು ಹಾಗೂ ಈ ಹಿಂದೆ ನಿಗಮದಿಂದ ಯಾವುದೇ ಸೌಲ್ಯ ಪಡೆದಿರಬಾರದು. ಅರ್ಜಿದಾರರು 18ರಿಂದ 60 ವರ್ಷದೊಳಗಿನ ವಯೋಮಾನದವರಾಗಿದ್ದು, ಕುಟುಂಬದ ವಾರ್ಷಿಕ ವರಮಾನ ಗ್ರಾಮೀಣ ಪ್ರದೇಶವಾದಲ್ಲಿ 1,50,000 ರೂ. ಹಾಗೂ ನಗರ ಪ್ರದೇಶವಾದಲ್ಲಿ 2 ಲಕ್ಷ ರೂ. ಮಿತಿಯೊಳಗಿರಬೇಕು.
ಅರ್ಜಿಗಳನ್ನು ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ, ರಜತಾದ್ರಿ, ಮಣಿಪಾಲ ಇವರಿಂದ ಉಚಿತವಾಗಿ ಪಡೆಯಬಹುದು. ಅರ್ಹ ಅರ್ಜಿದಾರರು ಅರ್ಜಿಯೊಂದಿಗೆ ಪಾಸ್‌ಪೋರ್ಟ್ ಸೈಜಿನ ಭಾವಚಿತ್ರ, ಜಾತಿ ಪ್ರಮಾಣ ಪತ್ರ, ಆದಾಯ ದೃಢೀಕರಣ ಪತ್ರ, ಪಡಿತರ ಚೀಟಿ, ಆಧಾರ್ ಕಾರ್ಡ್, ಬ್ಯಾಂಕ್ ಉಳಿತಾಯ ಖಾತೆಯ ಪ್ರತಿ, ಯೋಜನಾ ವರದಿ/ ದರಪಟ್ಟಿ, ವಾಹನ ಚಾಲನಾ ಪರವಾನಗಿ ಮತ್ತು ಬ್ಯಾಡ್ಜ್‌ನ ಜೆರಾಕ್ಸ್ ಪ್ರತಿಗಳನ್ನು ಲಗತ್ತಿಸಿ, ನ.16ರೊಳಗೆ ಜಿಲ್ಲಾ ಕಚೇರಿಗೆ ಸಲ್ಲಿಸುವಂತೆ ನಿಗಮದ ಜಿಲ್ಲಾ ವ್ಯವಸ್ಥಾಪಕರ ಪ್ರಕಟಣೆ ತಿಳಿಸಿದೆ.







