ಚಿಕ್ಕಮಗಳೂರು: 3 ತಿಂಗಳ ಮಗುವನ್ನು ನಾಲೆಗೆ ಎಸೆದು ಕೊಲೆಗೈದ ತಾಯಿ; ಆರೋಪ

ಚಿಕ್ಕಮಗಳೂರು, ನ.5: ಹೆತ್ತ ತಾಯಿಯೇ ತನ್ನ ಮಗುವನ್ನು ನಾಲೆಗೆ ಎಸೆದು ಹತ್ಯೆ ಮಾಡಿರುವ ಘಟನೆ ತರೀಕೆರೆ ತಾಲೂಕಿನ ಹಳಿಯೂರು ಗ್ರಾಮದಲ್ಲಿ ಮಂಗಳವಾರ ಸಂಜೆ ವರದಿಯಾಗಿದೆ.
ತರೀಕೆರೆ ಪಟ್ಟಣದ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಕಮಲ ಎಂಬ ಮಹಿಳೆ ತನ್ನ ಮೂರು ತಿಂಗಳ ಮಗುವನ್ನು ಹಳಿಯೂರು ಗ್ರಾಮದಲ್ಲಿ ಹರಿಯುವ ಭದ್ರಾ ನಾಲೆಗೆ ಎಸೆದು ಹತ್ಯೆ ಮಾಡಿದ್ದಾಳೆಂದು ತಿಳಿದುಬಂದಿದ್ದು, ಮಗುವಿನ ಮೃತದೇಹವು ತಾಲೂಕಿನ ಬೆಟ್ಟತಾವರೆ ಗ್ರಾಮದ ನಾಲೆಯಲ್ಲಿ ಪತ್ತೆಯಾಗಿದೆ. ತರೀಕೆರೆ ಠಾಣೆಯ ಪೊಲೀಸರು ಸ್ಥಳೀಯರ ಸಹಕಾರದಿಂದ ಮಗುವಿನ ಮೃತದೇಹವನ್ನು ನಾಲೆಯಿಂದ ಹೊರ ತೆಗೆದು ತಾಲೂಕು ಆಸ್ಪತ್ರೆಯಲ್ಲಿರಿಸಿದ್ದಾರೆ.
ಮಗುವಿನ ತಾಯಿ ಕಮಲ ಕಡೂರು ತಾಲೂಕು ನಿಡಘಟ್ಟ ಗ್ರಾಮದ ತಿಮ್ಮಯ್ಯ ಎಂಬವರ ಪತ್ನಿ ಎಂದು ತಿಳಿದುಬಂದಿದ್ದು, ಕೌಟುಂಬಿಕ ಕಲಹದಿಂದ ಮಹಿಳೆ ತನ್ನ ಮಗುವನ್ನು ಹತ್ಯೆಗೈದು ನಾಲೆಗೆ ಎಸೆದಿರಬಹುದೆಂದು ಪೊಲೀಸರು ಶಂಕಿಸಿದ್ದು, ಹೆಚ್ಚಿನ ಮಾಹಿತಿ ತನಿಖೆಯಿಂದ ತಿಳಿದು ಬರಬೇಕಿದೆ.
Next Story





