ಬಂಟ್ವಾಳ: ನ. 8ರಂದು ಬಹುಗ್ರಾಮ ಶುದ್ಧ ಕುಡಿಯುವ ನೀರಿನ ಯೋಜನೆಯ ಉದ್ಘಾಟನೆ
ಬಂಟ್ವಾಳ, ನ. 5: ದ.ಕ. ಜಿಲ್ಲಾ ಪಂಚಾಯತ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮಂಗಳೂರು ವಿಭಾಗ ಸಹಯೋಗದೊಂದಿಗೆ ಮಾಣಿ ಮತ್ತು 51 ಜನವಸತಿಗಳ ಬಹುಗ್ರಾಮ ಶುದ್ಧ ಕುಡಿಯುವ ನೀರಿನ ಯೋಜನೆಯ ಉದ್ಘಾಟನೆ ಕಾರ್ಯಕ್ರಮ ನ. 8ರಂದು ನಡೆಯಲಿದೆ.
ಅಂದು ಮಧ್ಯಾಹ್ನ 2ಗಂಟೆಗೆ ಪೆರಾಜೆ ಗ್ರಾಪಂ ಗಡಿಯಾರದಲ್ಲಿರುವ ನೀರು ಶುದ್ದೀಕರಣ ಘಟಕದ ಅನಾವರಣ ಕಾರ್ಯಕ್ರಮ ನಡೆಯಲಿದ್ದು, ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಉದ್ಘಾಟಿಸುವರು.
ಶಾಸಕ ರಾಜೇಶ್ ನಾಯ್ಕ್ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಗೌರವ ಉಪಸ್ಥಿತರಿರುವರು. ವಿಧಾನ ಪರಿಷತ್ ಸಭಾಪತಿ ಕೆ. ಪ್ರತಾಪ್‌ಚಂದ್ರ ಶೆಟ್ಟಿ, ದ.ಕ. ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಯು.ಟಿ.ಖಾದರ್, ಸಂಜೀವ ಮಠಂದೂರು, ವಿಧಾನ ಪರಿಷತ್‌ನ ಐವನ್ ಡಿಸೋಜ, ಬಿ.ಎಂ. ಫಾರೂಕ್, ಕೆ.ಹರೀಶ್ ಕುಮಾರ್, ಆಯನೂರು ಮಂಜುನಾಥ, ಎಸ್.ಎಲ್. ಭೋಜೆಗೌಡ, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೂಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿಪಂ, ತಾಪಂ, ಗ್ರಾಪಂನ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಭಾಗವಹಿಸುವರು.
ಅಂದು ಮಧ್ಯಾಹ್ನ 3ಗಂಟೆಗೆ ದ.ಕ. ಜಿಲ್ಲಾ ಪಂಚಾಯತ್ ಹಾಗೂ ಬಂಟ್ವಾಳ ತಾಲೂಕು ಪಂಚಾಯತ್‌ನಿಂದ ಚಿಂತನ-ಮಂಥನ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.





