ಶಶಿಕಲಾರ 1,600 ಕೋ.ರೂ.ಗಳ ಬೇನಾಮಿ ಆಸ್ತಿ ಜಪ್ತಿ

ಹೊಸದಿಲ್ಲಿ,ನ.5: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಆಪ್ತಸ್ನೇಹಿತೆಯಾಗಿದ್ದ ವಿ.ಕೆ.ಶಶಿಕಲಾ ಅವರಿಗೆ ಸೇರಿದ 1,600 ಕೋ.ರೂ.ಮೌಲ್ಯದ ಬೇನಾಮಿ ಆಸ್ತಿಗಳನ್ನು ಆದಾಯ ತೆರಿಗೆ ಇಲಾಖೆಯು ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
2016ರಲ್ಲಿ ನೋಟು ನಿಷೇಧದ ಬೆನ್ನಲ್ಲೇ ಶಶಿಕಲಾ ಚೆನ್ನೈ,ಪುದುಚೇರಿ ಮತ್ತು ಕೊಯಮತ್ತೂರುಗಳಲ್ಲಿ ಒಂಭತ್ತು ಆಸ್ತಿಗಳನ್ನು ಖರೀದಿಸಿದ್ದರು ಎಂದರು.
ಶಶಿಕಲಾ ಸುಮಾರು 1,500 ಕೋ.ರೂ.ಗಳಷ್ಟು ಮೊತ್ತವನ್ನು ನಿಷೇಧಿತ ನೋಟುಗಳ ರೂಪದಲ್ಲಿ ಪಾವತಿಸಿ ಈ ಆಸ್ತಿಗಳನ್ನು ಬೇನಾಮಿ ಹೆಸರುಗಳಲ್ಲಿ ಖರೀದಿಸಿದ್ದರು. ಈ ಆಸ್ತಿಗಳ ಸ್ವಾಧೀನಕ್ಕಾಗಿ ಬೇನಾಮಿ ಆಸ್ತಿ ವಹಿವಾಟು ನಿಷೇಧ ಕಾಯ್ದೆಯಡಿ ತಾತ್ಕಾಲಿಕ ಆದೇಶವನ್ನು ಹೊರಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಅಕ್ರಮ ಸಂಪತ್ತು ಗಳಿಕೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ಶಶಿಕಲಾ ಪ್ರಸಕ್ತ ಬೆಂಗಳೂರು ಜೈಲಿನಲ್ಲಿದ್ದಾರೆ.
ಆದಾಯ ತೆರಿಗೆ ಇಲಾಖೆಯು 2017ರಲ್ಲಿ ಶಶಿಕಲಾ ಮತ್ತು ಇತರ ಕೆಲವರ ವಿರುದ್ಧ ವ್ಯಾಪಕ ದಾಳಿಗಳನ್ನು ನಡೆಸಿದ್ದ ಸಂದರ್ಭ ಈ ಬೇನಾಮಿ ಆಸ್ತಿಗಳ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಹಿಂದೆ ಇಲಾಖೆಯು ಶಶಿಕಲಾರನ್ನು ಪ್ರಶ್ನಿಸಿತ್ತು.





