ಅಕ್ರಮ ನೋಂದಣಿ ಪ್ರಕರಣ: 4 ಸಬ್ ರಿಜಿಸ್ಟ್ರಾರ್ ಸೇರಿ 24 ಮಂದಿಗೆ ಜಾಮೀನು
ಬೆಂಗಳೂರು, ನ.5: ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಅಕ್ರಮ ನೋಂದಣಿ ಮಾಡಿದ್ದಾರೆ ಎನ್ನಲಾಗಿರುವ ಆರೋಪಕ್ಕೆ ಸಂಬಂಧಿಸಿದಂತೆ ನಗರದ 56ನೆ ಸಿಸಿಎಚ್ ಕೋರ್ಟ್ 4 ಸಬ್ ರಿಜಿಸ್ಟ್ರಾರ್ ಸೇರಿ 24 ಮಂದಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಸಬ್ ರಿಜಿಸ್ಟ್ರಾರ್‌ಗಳಾದ ವಿ.ಹೇಮಾವತಿ, ವೈ.ಎಚ್.ಸರೋಜಾ, ಭಾಸ್ಕರ್ ಶೌರಿ ಹಾಗೂ ವಿ.ಪ್ರಸನ್ನ ಸೇರಿ 24 ಮಂದಿಗೆ ನ್ಯಾಯಾಧೀಶ ನಾರಾಯಣ ಪ್ರಸಾದ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದಾರೆ.
7 ದಿನಗಳ ಒಳಗೆ ತನಿಖಾಧಿಕಾರಿ ಮುಂದೆ ಹಾಜರಾಗಬೇಕು. ಸಾಕ್ಷ ನಾಶ ಮಾಡದೇ ತನಿಖೆಗೆ ಸಹಕರಿಸಬೇಕು. ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ತನಿಖಾಧಿಕಾರಿಗೆ ನೀಡಬೇಕು ಎಂದು ಸೂಚನೆ ನೀಡಿದ್ದಾರೆ.
ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಅಕ್ರಮ ನೋಂದಣಿ ಸಂಬಂಧ ಐಜಿಆರ್ ತ್ರಿಲೋಕ್ ಚಂದ್ರ ಪ್ರಕರಣ ದಾಖಲಿಸಿದ್ದರು. ಇಲಾಖಾ ತನಿಖೆಯಲ್ಲಿ ಅಕ್ರಮ ಸಾಬೀತು ಹಿನ್ನೆಲೆಯಲ್ಲಿ ಸಬ್ ರಿಜಿಸ್ಟ್ರಾರ್ ಸೇರಿ ಸಿಬ್ಬಂದಿ ವಿರುದ್ಧ ದೂರು ದಾಖಲಿಸಲಾಗಿತ್ತು. ಸಿಸಿಬಿ ಪೊಲೀಸರು ಆನೇಕಲ್ ದಾಸನಪುರ, ಪೀಣ್ಯ, ಜಾಲಹಳ್ಳಿ, ಮಾದನಾಯಕನಹಳ್ಳಿ, ಲಗ್ಗೆರೆ, ಕೆಂಗೇರಿ, ಹೊಸಕೋಟೆ, ಬ್ಯಾಟರಾಯನಪುರ ಮತ್ತು ಬಿಡಿಎಗೆ ನೋಟಿಸ್ ನೀಡಲಾಗಿತ್ತು. ನೋಟಿಸ್ ನೀಡಿದ ತಕ್ಷಣ ಆರೋಪಿಗಳು ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು.







