ಮಾಹಿತಿ ಆಯೋಗದಲ್ಲಿ ಖಾಯಂ ಸಿಬ್ಬಂದಿಗಳೇ ಇಲ್ಲ !

ಬೆಂಗಳೂರು, ನ.5: ಕರ್ನಾಟಕ ಮಾಹಿತಿ ಆಯೋಗ ಅಸ್ತಿತ್ವಕ್ಕೆ ಬಂದು 14 ವರ್ಷ ಕಳೆದರೂ ಇದುವರೆಗೂ ಇಲ್ಲಿ ಖಾಯಂ ಸಿಬ್ಬಂದಿ ನೇಮಕವಾಗಿಲ್ಲ. ವರ್ಷಕ್ಕೆ ಸಾವಿರಾರು ದೂರುಗಳು ದಾಖಲಾದರೂ, ಎಲ್ಲವನ್ನೂ ಹೊರಗುತ್ತಿಗೆ ನೌಕರರೇ ನೋಡಿಕೊಳ್ಳುತ್ತಿದ್ದಾರೆ..!
ನೇಮಕಾತಿ ವೃಂದ ಮತ್ತು ನೇಮಕಾತಿ(ಸಿ ಅಂಡ್ ಆರ್ ರೂಲ್ಸ್) ನಿಯಮಾವಳಿಗಳನ್ನೇ ಈತನಕ ಮಾಹಿತಿ ಆಯೋಗದಲ್ಲಿ ರೂಪಿಸಿಲ್ಲ ಎಂಬುದು ಹಾಸ್ಯಾಸ್ಪದವಾದುದಾಗಿದೆ. ಇಲ್ಲಿ ಹೊರಗುತ್ತಿಗೆ ಆಧಾರದಲ್ಲಿ 100 ಕ್ಕೂ ಅಧಿಕ ಸಿಬ್ಬಂದಿ ದುಡಿಯುತ್ತಿದ್ದಾರೆ.
10 ಸಾವಿರ ದೂರು ದಾಖಲು: ಮಾಹಿತಿ ಆಯೋಗದಲ್ಲಿ ಪ್ರತಿ ವರ್ಷ ಸುಮಾರು 8-10 ಸಾವಿರಷ್ಟು ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ದೂರುಗಳು ದಾಖಲಾಗುತ್ತವೆ. ಮಾಹಿತಿ ಆಯೋಗದ 10 ಕೋರ್ಟ್‌ಗಳಲ್ಲಿ ಪ್ರಕರಣದ ವಿಚಾರಣೆಗೆ ಅವಕಾಶ ಕಲ್ಪಿಸಲಾಗಿದೆ.
ಮುಖ್ಯ ಆಯುಕ್ತರ ಜತೆಗೆ ಒಂಬತ್ತು ಆಯುಕ್ತರು ಪ್ರಕರಣಗಳ ವಿಚಾರಣೆ ನಡೆಸುತ್ತಾರೆ. ಆದರೂ, ಇನ್ನೂ ಆಯೋಗದಲ್ಲಿ 22 ಸಾವಿರದಷ್ಟು ಪ್ರಕರಣಗಳು ಬಾಕಿಯಿದ್ದು, ತುಕ್ಕು ಹಿಡಿಯುತ್ತಿವೆ.
ಮಾಹಿತಿ ಆಯೋಗದಲ್ಲಿ ದಾಖಲಾಗುವ ಪ್ರಕರಣಗಳ ಹಂಚಿಕೆ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಈಗ ಕಂಪ್ಯೂಟರ್ ಮೂಲಕ 10 ಆಯುಕ್ತರಿಗೂ ಪ್ರಕರಣಗಳ ಹಂಚಿಕೆಯಾಗುವ ವ್ಯವಸ್ಥೆಯಿದೆ. ಆಯುಕ್ತರು ಇಂತಹದ್ದೇ ಪ್ರಕರಣ ಬೇಕೆಂದು ಪಡೆದು ವಿಚಾರಣೆ ನಡೆಸುವ ಅವಕಾಶಕ್ಕೆ ಬ್ರೇಕ್ ಬಿದ್ದಂತಾಗಿದೆ.





