ಕಲಾಪಗಳಿಗೆ ಮಾಧ್ಯಮ ನಿರ್ಬಂಧದಿಂದ ಜನರ ಮೂಲಭೂತ ಹಕ್ಕಿಗೆ ಹೇಗೆ ಧಕ್ಕೆಯಾಗುತ್ತದೆ ?
ವಿವರಣೆ ನೀಡಲು ಸೂಚಿಸಿದ ಹೈಕೋರ್ಟ್

ಬೆಂಗಳೂರು, ನ.5: ವಿಧಾನಸಭೆಯ ಕಲಾಪಗಳಿಂದ ದೃಶ್ಯ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಿರ್ಬಂಧದಿಂದ ಜನರ ಮೂಲಭೂತ ಹಕ್ಕಿಗೆ ಯಾವ ರೀತಿ ಧಕ್ಕೆಯಾಗುತ್ತದೆ. ವರದಿ ಮಾಡಲು ಅಧಿಕೃತ ಆದೇಶ ಏನಾದರೂ ಇದೆಯೇ ಎಂಬ ಬಗ್ಗೆ ತಿಳಿಸಲು ಅರ್ಜಿದಾರರಿಗೆ ಸೂಚಿಸಿ, ವಿಚಾರಣೆಯನ್ನು ಮುಂದೂಡಿತು.
ಈ ಕುರಿತು ತುಮಕೂರು ಮೂಲದ ವಕೀಲ ಎಲ್.ರಮೇಶ್ ನಾಯಕ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಅರ್ಜಿದಾರ ಎಲ್.ರಮೇಶ್ ನಾಯಕ್ ವಾದಿಸಿ, ವಿಧಾನಸಭೆ ಸ್ಪೀಕರ್ ಅವರು ಅ.9ರಂದು ವಿಧಾನಸಭೆ ಕಲಾಪಗಳಿಂದ ದೃಶ್ಯ ಮಾಧ್ಯಮಗಳನ್ನು ನಿಷೇಧಿಸಿ ಜನರ ಮೂಲಭೂತ ಹಕ್ಕುಗಳಿಗೆ ಧಕ್ಕೆ ತಂದಿದ್ದಾರೆ. ಇದರಿಂದ, ಕಲಾಪದಲ್ಲಿ ತಮ್ಮ ಕ್ಷೇತ್ರದ ಶಾಸಕರು ಏನು ಮಾತನಾಡುತ್ತಾರೆ. ಸರಕಾರದ ಯೋಜನೆಗಳು ಏನು ಎಂಬ ಬಗ್ಗೆ ಜನರಿಗೆ ತಿಳಿಯುವುದಿಲ್ಲ ಎಂದು ಪೀಠಕ್ಕೆ ತಿಳಿಸಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ಜನರ ಮೂಲಭೂತ ಹಕ್ಕುಗಳಿಗೆ ಯಾವ ರೀತಿ ಧಕ್ಕೆಯಾಗುತ್ತದೆ ಎಂಬುದರ ಬಗ್ಗೆ ತಿಳಿಸಿ ಎಂದು ಸೂಚಿಸಿ, ವಿಚಾರಣೆಯನ್ನು ಮುಂದೂಡಿತು.