ಬಾಬರಿ ಮಸೀದಿ ಧ್ವಂಸಕ್ಕೆ ಕಾಂಗ್ರೆಸ್ ಕೂಡಾ ಹೊಣೆ: ಉವೈಸಿ

ಹೈದರಾಬಾದ್, ನ.5: ಬಾಬರಿ ಮಸೀದಿ ಧ್ವಂಸವಾಗಲು ಕಾಂಗ್ರೆಸ್ ಕೂಡಾ ಹೊಣೆಯಾಗಿದೆ ಎಂದು ಎಐಎಂಐಎಂ ಅಧ್ಯಕ್ಷ, ಸಂಸದ ಅಸಾದುದ್ದೀನ್ ಉವೈಸಿ ಹೇಳಿದ್ದಾರೆ.
‘ಬಾಬರಿ ಮಸೀದಿಯ ಬೀಗ ತೆರೆಸಿದವರು ದಿವಂಗತ ಪ್ರಧಾನಿ ರಾಜೀವ್ ಗಾಂಧಿ’ ಎಂಬ ಮಾಜಿ ಕೇಂದ್ರ ಸಚಿವ ಮಾಧವ ಗೋಡ್ಬೋಲೆಯವರ ಹೇಳಿಕೆಯನ್ನು ಅನುಮೋದಿಸಿದ ಉವೈಸಿ, ‘ಇದೊಂದು ಚಾರಿತ್ರಿಕ ಘಟನೆಯಾಗಿದೆ. ಆದರೆ ಬಾಬರಿ ಮಸೀದಿಯ ಬೀಗ ತೆರೆಸಿರುವುದಕ್ಕೂ ಶಾ ಬಾನೊ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಅದೂ ಕೂಡಾ (ಶಾಬಾನೊ ಪ್ರಕರಣ) ಚಾರಿತ್ರಿಕ ಘಟನೆ’ ಎಂದು ಹೇಳಿದರು.
ಬಾಬ್ರಿ ಮಸೀದಿ ಧ್ವಂಸವಾದ ಸಂದರ್ಭದಲ್ಲಿ ಗೋಡ್ಬೋಲೆ ಗೃಹ ಇಲಾಖೆಯ ಕಾರ್ಯದರ್ಶಿಯಾಗಿದ್ದರು. ಬಾಬ್ರಿ ಮಸೀದಿಯ ಬೀಗವನ್ನು ತೆರೆಸಿದವರು ದಿವಂಗತ ಪ್ರಧಾನಿ ರಾಜೀವ ಗಾಂಧಿ. ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ರಾಮಮಂದಿರಕ್ಕೆ ಶಿಲಾನ್ಯಾಸ ಕಾರ್ಯ ನಡೆದಿತ್ತು. ಆದ್ದರಿಂದ ಅವರನ್ನು ಎರಡನೇ ಕರಸೇವಕ ಎಂದು ಕರೆಯಲು ಬಯಸುತ್ತೇನೆ. ಈ ಎಲ್ಲಾ ಘಟನೆ ನಡೆಯಲು ಅವಕಾಶ ಮಾಡಿಕೊಟ್ಟ ಜಿಲ್ಲಾಧಿಕಾರಿ ಮೊದಲ ಕರಸೇವಕ ಎಂದು ಗೋಡ್ಬೋಲೆ ಟ್ವೀಟ್ ಮಾಡಿದ್ದರು.
ರಾಜೀವ್ ಗಾಂಧಿ ಸಕಾಲಿಕ ಕ್ರಮ ಕೈಗೊಂಡಿದ್ದರೆ ಆಗ ಸಮಸ್ಯೆಗೆ ಪರಿಹಾರ ದೊರಕುತ್ತಿತ್ತು. ಯಾಕೆಂದರೆ ಆಗ ಎರಡೂ ಕಡೆಯಲ್ಲಿ ರಾಜಕೀಯ ನಿಲುವು ಬಲವರ್ಧನೆಗೊಂಡಿರಲಿಲ್ಲ. ಕೊಡು-ಕೊಳ್ಳುವ ಸೂತ್ರದ ಅನ್ವಯ ಎಲ್ಲರಿಗೂ ಒಪ್ಪಿಗೆಯಾಗುವ ಪರಿಹಾರ ಕಂಡುಕೊಳ್ಳಬಹುದಿತ್ತು ಎಂದು ಗೋಡ್ಬೋಲೆ ಹೇಳಿದ್ದರು.







